ಸ್ವತಂತ್ರ ಅಂಗಸಂಸ್ಥೆಗಳು ಆಳುವ ಸರಕಾರದ ಅಡಿಯಾಳಾಗಿ ದುಡಿಯುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ : ಬಿ.ಕೆ.ಹರಿಪ್ರಸಾದ್
ಬೆಂಗಳೂರು: ‘ಬಿಜೆಪಿ ಮತ್ತು ನರೇಂದ್ರ ಮೋದಿ ಸರಕಾರ, ದೇಶ ಭವಿಷ್ಯತ್ತಿನಲ್ಲಿ ಎದುರಿಸಬೇಕಾದ ಕರಾಳ ದಿನಗಳನ್ನು ಎದುರಿಸಲು ಸನ್ನದ್ಧರಾಗಬೇಕೆಂಬ ಮುನ್ಸೂಚನೆ ನೀಡುತ್ತಿದೆ’ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿ ಕುರಿತು ಟೀಕಿಸಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಕೇಂದ್ರದ ಫ್ಯಾಶಿಸ್ಟ್ ಸರಕಾರ ಗಂಭೀರ ಹಾಗೂ ಅತ್ಯಂತ ಅಪಾಯಕಾರಿ ಹಂತದ ತುತ್ತ ತುದಿಯಲ್ಲಿ ತಂದು ನಿಲ್ಲಿಸಿದೆ. ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪಕ್ಷದ ಎಲ್ಲ ಬ್ಯಾಂಕ್ ಖಾತೆಗಳನ್ನು ಚುನಾವಣೆಯ ಸಂದರ್ಭದಲ್ಲೇ ಸ್ಥಗಿತಗೊಳಿಸಲಾಗಿದೆ. ಜನರಿಂದ ಆಯ್ಕೆಯಾದ ದಿಲ್ಲಿ ಸಿಎಂ ಕೇಜ್ರಿವಾಲ್ ಅವರನ್ನು ದ್ವೇಷದ ರಾಜಕಾರಣದಿಂದಾಗಿ ರಾತ್ರೋರಾತ್ರಿ ಬಂಧಿಸಲಾಗಿದೆ. ಇದು ಸರ್ವಾಧಿಕಾರಿ ನಡೆಯ ಸ್ಪಷ್ಟ ಚಿತ್ರಣ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಈಡಿ, ಐಟಿ ಎಲ್ಲ ಸ್ವತಂತ್ರ ಅಂಗಸಂಸ್ಥೆಗಳು ಆಳುವ ಸರಕಾರದ ಅಡಿಯಾಳಗಿ ದುಡಿಯುತ್ತಿರುವುದು ದೇಶದ ಭವಿಷ್ಯತ್ತಿಗೆ ಮಾರಕ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಈಗಾಗಲೇ ಇಲ್ಲವಾಗಿಸಿರುವ ಬಿಜೆಪಿ ಪಕ್ಷ, ಈಗ ಸಂಪೂರ್ಣವಾಗಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಲು ಹೊರಟಿದೆ ಎಂದು ಹರಿಪ್ರಸಾದ್ ದೂರಿದ್ದಾರೆ.
‘ಇಂತಹ ಗಂಡಾಂತರದಿಂದ ಪಾರಾಗಲು, ಪ್ರಜಾಪ್ರಭುತ್ವ ಉಳಿಸಲು ಪ್ರಜೆಗಳಿಂದ ಮಾತ್ರ ಸಾಧ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧರ್ಮ, ಜಾತಿ, ವ್ಯಕ್ತಿಗಿಂತಲೂ ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ಉಳಿಯಲು, ‘ಇಂಡಿಯಾ’ ಮೈತ್ರಿಕೂಟದ ಗೆಲುವು ಅನಿವಾರ್ಯ’ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.