ಹಳೆ ಬಸ್ಗಳನ್ನು ಬಳಸಿಕೊಂಡು ಭೋಜನ ಬಂಡಿಗಳ ನಿರ್ಮಾಣಕ್ಕೆ ಮುಂದಾದ ಬಿಎಂಟಿಸಿ
Photo : X/@ChristinMP_
ಬೆಂಗಳೂರು : ಹಳೆ ಬಸ್ಗಳನ್ನು ಬಳಸಿಕೊಂಡು ಭೋಜನ ಬಂಡಿಗಳ ನಿರ್ಮಾಣಕ್ಕೆ ಬಿಎಂಟಿಸಿ ಮುಂದಾಗಿದ್ದು, ಸದ್ಯ ಯಶವಂತಪುರ ಅಥವಾ ಪೀಣ್ಯ ಡಿಪೋದಲ್ಲಿ ಈ ಭೋಜನ ಬಂಡಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಬಸ್ ಬಿಎಂಟಿಸಿ ಉತ್ತರ ವಲಯದಲ್ಲಿ 10 ಲಕ್ಷ ಕಿಲೋ ಮೀಟರ್ ಸಂಚರಿಸಿದೆ ಕಾರ್ಯ ಸ್ಥಗಿತಗೊಳಿಸಿರುವ ಬಸ್ ಅನ್ನು ಕಾರ್ಯಾಗಾರ-4ರ ಸಹಾಯಕ ತಾಂತ್ರಿಕ ಎಂಜಿನಿಯರ್ ಆರ್.ಆನಂದಕುಮಾರ್ ಮತ್ತು ತಾಂತ್ರಿಕ ಸಹಾಯಕರು ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಾರೆ.
ಈ ಬಸ್ ಕ್ಯಾಂಟೀನ್ ಅನ್ನು ನಿಗಮದ ಸಿಬ್ಬಂದಿಗಾಗಿ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಬಳಸಲಾಗುವುದು. ಬಸ್ ಎರಡೂ ಕಡೆಯಲ್ಲೂ "ಭೋಜನ ಬಂಡಿ- ಬನ್ನಿ ಕುಳಿತು ಊಟ ಮಾಡೋಣ" ಎನ್ನುವ ಘೋಷವಾಕ್ಯಗಳನ್ನು ಬರೆಯಲಾಗಿದೆ. ಇನ್ನು ಬಸ್ ಒಳಗಿನ ಸೀಟ್ಗಳನ್ನು ತೆಗೆದು ಟೇಬಲ್ ಮತ್ತು ಆಸನಗಳನ್ನಾಗಿ ತಯಾರು ಮಾಡಲಾಗಿದೆ.
ನಗರದಲ್ಲಿ 19 ಬಿಎಂಟಿಸಿ ಡಿಪೋಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆಗಳಲ್ಲಿ ಕ್ಯಾಂಟೀನ್ ಗಳಿವೆ. ಹಲವು ಕಡೆಗಳಲ್ಲಿ ಇಲ್ಲ. ಕಾರ್ಯಾಚರಣೆ ನಿಲ್ಲಿಸಿರುವ ಬಸ್ಗಳನ್ನು ಕ್ಯಾಂಟೀನ್ ಆಗಿ ಪರಿವರ್ತಿಸಿ 17 ಡಿಪೋಗಳಲ್ಲಿ ಅಳವಡಿಸುವ ಯೋಜನೆ ಇದಾಗಿದೆ. ಸದ್ಯ ಒಂದು ಕ್ಯಾಂಟೀನ್ ತಯಾರಾಗಿದೆ ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.