ದೆಹಲಿ ಫಲಿತಾಂಶ | ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ : ಬೊಮ್ಮಾಯಿ

ಬೆಂಗಳೂರು : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ವೈಖರಿ, ಭ್ರಷ್ಟಾಚಾರ ನೋಡಿ ಜನ ರೋಸಿ ಹೋಗಿ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನರು ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಮೂವತ್ತು ವರ್ಷದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲಿಸಿ ದೆಹಲಿ ಜನರು ಆಪ್ ಗೆ ಬೆಂಬಲಿಸಿದ್ದರು. ಆದರೆ, ಅವರ ಆಡಳಿತ ವೈಖರಿ ಭ್ರಷ್ಟಾಚಾರ ನೋಡಿ ಜನ ರೋಸಿ ಹೋಗಿದ್ದಾರೆ. ಇನ್ನೊಂದೆಡೆ ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನರು ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದ್ದಾರೆ. ಆಪ್ ಪ್ರತಿಯೊಂದರಲ್ಲೂ ಸುಳ್ಳು ಹೇಳುವುದು, ಹಲವಾರು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಾವು ಮಾಡದಿರುವ ಕೆಲಸಕ್ಕೆ ಬೇರೆಯವರನ್ನು ದೂಷಿಸುತ್ತಿದ್ದರು. ರಸ್ತೆ, ಕುಡಿಯುವ ನೀರು ಕೊಡಲು ಆಗಿಲ್ಲ. ಆಯುಷ್ಮಾನ್ ಯೋಜನೆ ಜಾರಿಗೊಳಿಸದಿರುವುದು ಬಡವರಿಗೆ ಬೇಸರ ತರಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಬರೇ ಘೊಷಣೆ ಮೂಲಕ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈಗ 21ಶತಮಾನದಲ್ಲಿ ಯುವಕರು ಎಲ್ಲವನ್ನೂ ಗಮನಿಸುತ್ತಾರೆ. ಕಾಂಗ್ರೆಸ್ ಕೇವಲ ಘೋಷಣೆ ಮಾಡುವುದರಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಸಾಮಾನ್ಯರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದರು.
ದೆಹಲಿ ಒಂದು ನಗರದ ರಾಜ್ಯ, ಹೊರ ವಲಯದಲ್ಲಿರುವ ರೈತರು, ಹರಿಯಾಣದ ಜಾಟರು, ಪಂಜಾಬಿನ ಜನರು, ಉತ್ತರ ಪ್ರದೇಶ, ಬಿಹಾರದಿಂದ ಬಂದಿರುವ ದುಡಿಯುವ ವರ್ಗ, ಹಲವಾರು ಅಲ್ಪಸಂಖ್ಯಾತ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ರಾಷ್ಟ್ರೀಯತೆ ನಂಬಿರುವ ಅಲ್ಪಸಂಖ್ಯಾತರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.