ರಾಜಕೀಯ ಕಾರಣಗಳಿಗೋಸ್ಕರ ಧರ್ಮ-ದೇವರನ್ನು ಕೊಳ್ಳುವುದು ಅಪರಾಧ: ವಿ.ಎಸ್.ಉಗ್ರಪ್ಪ
ಬೆಂಗಳೂರು: ರಾಜಕೀಯ ಕಾರಣಗಳಿಗೋಸ್ಕರ ಧರ್ಮ ಮತ್ತು ದೇವರನ್ನು ಕೊಳ್ಳುವುದು ಅಪರಾಧ. ಧರ್ಮ ಮತ್ತು ದೇವರನ್ನು ಬಳಸಿಕೊಂಡವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ ಅವರನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಾಯಣ, ರಾಮ ಮತ್ತು ಮಹರ್ಷಿ ವಾಲ್ಮೀಕಿ ಅವರಿಗೆ ಬಿಜೆಪಿ ಅಪಚಾರ ಮಾಡಿದೆ. ಅಯೋಧ್ಯ ರಾಮ ಮಂದಿರ ಜನರ ದೇವಸ್ಥಾನವಾಗಿ ಇರಬೇಕೆ ಹೊರತು, ಬಿಜೆಪಿಯವರ ದೇವಸ್ಥಾನ ಆಗಬಾರದು ಎಂದರು.
ರಾಮಲಲ್ಲಾನ ಪೂಜೆಗೆ ಅಯೋಧ್ಯೆಯಲ್ಲಿ ಮೊದಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರಕಾರ. ರಾಜೀವ್ ಗಾಂಧಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ರಾಮ ಲಲ್ಲಾನ ಪೂಜೆಗೆ ಅವಕಾಶ ನೀಡಿದರು. ಬಿಜೆಪಿಯವರ ಸಂಸ್ಕೃತಿ ರಾಯಾಯಣದ ಅಥವಾ ಸಂವಿಧಾನದ ಆದರ್ಶಗಳನ್ನು ಆಧರಿಸಿವೆಯೇ ಎಂದು ಅವರು ಪ್ರಶ್ನಿಸಿದರು.
ರಾಮ, ಲಕ್ಷ್ಮಣ ಮತ್ತು ಸೀತೆ ಎಲ್ಲಿಯೂ ಸಹ ತಮ್ಮನ್ನು ತಾವು ದೇವರುಗಳು ಎಂದು ಬಿಂಬಿಸಿಕೊಂಡಿಲ್ಲ. ರಾಮ ಎಲ್ಲಿಯೂ ದೇವಸ್ಥಾನವನ್ನು ಬಯಸಿದವನಲ್ಲ ರಾಮನ ಆದರ್ಶಗಳನ್ನು ನಾವು ಗೌರವಿಸುತ್ತೇವೆ. ರಾಮಮಂದಿರ ನಿರ್ಮಾಣಕ್ಕೆ ಮೀಸಲಾಗಿರುವ ಟ್ರಸ್ಟನ್ನು ಮೋದಿ ಟೀಮ್ ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹೈಜಾಕ್ ಮಾಡಿದೆ ಎಂದು ವಿ.ಎಸ್.ಉಗ್ರಪ್ಪ ದೂರಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಮಾಯಣ ಕರ್ತೃ ವಾಲ್ಮೀಕಿ ಅವರ ಹೆಸರಿಟ್ಟಿರುವುದು ಸ್ವಾಗತಾರ್ಹ. ರಾಮನ ಆದರ್ಶಗಳನ್ನು ಬಿಜೆಪಿಯವರು ಪಾಲನೆ ಮಾಡುತ್ತಿದ್ದಾರೆಯೇ ಎಂದು ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.
ರಾಮಾಯಣ, ಮಹಾಭಾರತ ನಡೆದಿದ್ದೆ ಭಾರತದಲ್ಲಿ ಹೆಣ್ಣನ್ನು ಕಾಪಾಡಲು. ಆದರೆ ಇಂದು ಇಡೀ ದೇಶ ಅತ್ಯಾಚಾರದ ಕೋಪವಾಗಿದೆ. ಬಿಜೆಪಿಯವರೇ ನೀವು ನಿಮ್ಮ ಕುಟುಂಬವನ್ನು, ಭಾರತವನ್ನು ಎಂದಾದರೂ ರಕ್ಷಣೆ ಮಾಡಿದ್ದೀರಾ ಎಂದು ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಬಂಧಿತನಾಗಿರುವ ವ್ಯಕ್ತಿ ಶ್ರೀಕಾಂತ್ ಪೂಜಾರಿ ಮೇಲೆ ಸುಮಾರು 14 ರಿಂದ 16 ಪ್ರಕರಣಗಳಿವೆ. ಆರೋಪಿ ಶ್ರೀಕಾಂತ್ ಪೂಜಾರಿಯು ಈಗಾಗಲೇ ಒಂದಷ್ಟು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಅಕ್ರಮ ಸಾರಾಯಿ ಮಾರಾಟ, ಮಟ್ಕಾ ಜೂಜು ಮಾಡುವ ವ್ಯಕ್ತಿ ನಿಜವಾದ ಕರಸೇವಕನೇ, ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿಕೊಂಡಿರುವವನನ್ನು ಬಿಜೆಪಿ ತನ್ನ ಪಕ್ಷದವನೆಂದು ಸಮರ್ಥಿಸುತ್ತದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.
ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ಸಮಾಜ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಶ್ರೀಕಾಂತ ಪೂಜಾರಿ ಪರವಾಗಿ ಬಿಜೆಪಿ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಬಿಜೆಪಿ ಆಡಳಿತದ ನಾಲ್ಕು ವರ್ಷದಲ್ಲಿ 4350 ಕೊಲೆ, 6 ಸಾವಿರದ ದರೋಡೆ ಪ್ರಕರಣಗಳು, 8,000 ದಲಿತರ ಮೇಲಿನ ಹಲ್ಲೆಗಳು ಹೀಗೆ ಇಡೀ ಕಾನೂನು ಸುವ್ಯವಸ್ಥೆಗೆ ಹಾಳಾಗಿ ಹೋಗಿತ್ತು ಎಂದು ಲಕ್ಷ್ಮಣ್ ತಿಳಿಸಿದರು.
ಸಿದ್ದರಾಮಯ್ಯನವರು ಎಂದಾದರೂ ರಾಮಮಂದಿರ ಕಟ್ಟಬೇಡಿ ನಾನು ರಾಮನ ವಿರುದ್ಧ ಇದ್ದೇನೆ ಎಂದು ಹೇಳಿದ್ದಾರೆಯೇ, ಆದರೂ ಕಪೋಲಕಲ್ಪಿತ ವಿಷಯಗಳನ್ನು ಹರಿಬಿಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಲಕ್ಷ್ಮಣ್ ಹೇಳಿದರು.