ಸರಕಾರ ಸ್ವಾಮೀಜಿಗೆ ಬೆದರಿಕೆ ಹಾಕುವುದು ಸರಿಯಲ್ಲ : ಬಿ.ವೈ.ವಿಜಯೇಂದ್ರ
ಬೆಂಗಳೂರು : ವಿಶ್ವ ಒಕ್ಕಲಿಗರ ಮಠದ ಶ್ರಿ ಚಂದ್ರಶೇಖರನಾಥ ಸ್ವಾಮಿ ಸಹಜವಾಗಿ ಆಕ್ರೋಶದಿಂದ ಮಾತನಾಡಿದ್ದು, ಸರಕಾರ ಸ್ವಾಮೀಜಿಗೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.
ಸೋಮವಾರ ಇಲ್ಲಿನ ಮೈಸೂರು ರಸ್ತೆಯಲ್ಲಿರುವ ವಿಶ್ವ ಒಕ್ಕಲಿಗರ ಮಠದಲ್ಲಿ ಚಂದ್ರಶೇಖರನಾಥ ಸ್ವಾಮಿ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ‘ವಕ್ಫ್ ವಿಚಾರದಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮಿ ರಾಜ್ಯ ಸರಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ರಾಜ್ಯ ಸರಕಾರವು ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ, ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ದೂರಿದರು.
ಸ್ವಾಮೀಜಿ ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು. ಆದರೂ, ಒತ್ತಡ ಹಾಕುತ್ತಿರುವುದು ಸರಿಯಲ್ಲ. ರಾಜ್ಯ ಸರಕಾರವು ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸುತ್ತಿದೆ, ಮಠಮಾನ್ಯಗಳ ಜಮೀನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ನೋಟಿಸ್ ಕೊಡುತ್ತಿದೆ. ಇದರ ವಿರುದ್ಧ ರೈತರು ಬೀದಿಗೆ ಇಳಿದಿದ್ದಾರೆ ಎಂದು ವಿವರಿಸಿದರು.
ಸ್ವಾಮೀಜಿ ಪರ ನಿಲ್ಲಲಿದೆ: ‘ಕರಿಯ’ ಎಂದವರ ಬಗ್ಗೆ ಎಫ್‍ಐಆರ್ ಆಗಿದೆಯೇ?. ವಕ್ಫ್ ವಿಚಾರದಲ್ಲಿ ರೈತರಿಗೆ ಆಗಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸ್ವಾಮೀಜಿ ಒಂದು ಮಾತನ್ನಾಡಿದ್ದರು. ಅದಕ್ಕೆ ಅವರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ. ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ ಮೇಲೆ ಇನ್ನೇನು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.