ನದೀಮ್ ಖಾನ್ ಅಕ್ರಮ ಬಂಧನಕ್ಕೆ ಯತ್ನಿಸಿದ ಆರೋಪ: ದಿಲ್ಲಿ ಪೊಲೀಸರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು
ನದೀಮ್ ಖಾನ್ (en.wikipedia.org)
ಬೆಂಗಳೂರು: ಮಾನವ ಹಕ್ಕುಗಳ ಕಾರ್ಯಕರ್ತ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) (APCR) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಲು ಯತ್ನಿಸಿದ ಆರೋಪದಡಿ ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸಿಬ್ಬಂದಿ ಎನ್ನಲಾದ ನಾಲ್ವರ ವಿರುದ್ಧ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನದೀಮ್ ಖಾನ್ ಅವರನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲು ಮುಂದಾದ ಆರೋಪದಡಿ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಓರ್ವ ಅಧಿಕಾರಿ ಶ್ರೇಣಿ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಶನಿವಾರ ಸಂಜೆ 5ರ ಸುಮಾರಿಗೆ ದಿಲ್ಲಿಯ ಶಾಹಿನ್ ಬಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಎಂದು ಹೇಳಿಕೊಂಡು ಬಂದ ನಾಲ್ವರು, ನದೀಮ್ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದಾರೆ. ಈ ವೇಳೆ ವಾರಂಟ್ ಅಥವಾ ಇನ್ನಿತರ ದಾಖಲೆ ನೀಡುವಂತೆ ಕುಟುಂಬಸ್ಥರು ಪ್ರಶ್ನಿಸಿದಾಗ ಬೆದರಿಕೆವೊಡ್ಡಿದ್ದಾರೆನ್ನಲಾಗಿದೆ.
ಅಷ್ಟೇ ಅಲ್ಲದೆ, ನಾಲ್ಕೈದು ಗಂಟೆಗಳ ಕಾಲ ನದೀಮ್ ಅವರ ನಿವಾಸದಲ್ಲ್ಲೇ ಕುಳಿತ ದಿಲ್ಲಿ ಪೊಲೀಸರು ತನಿಖೆಗೆ ನದೀಮ್ನನ್ನು ದಿಲ್ಲಿಗೆ ಬರುವಂತೆ ಒತ್ತಡ ಹೇರಿದ್ದಾರೆ. ಯಾವುದೇ ಸಮನ್ಸ್ ನೋಟಿಸ್, ವಾರಂಟ್ ಇಲ್ಲದಿದ್ದರೂ, ಎಸ್ಎಚ್ಒ ಮತ್ತು ಇತರ ಪೊಲೀಸ್ ಅಧಿಕಾರಿಗಳು ಮನೆಯಲ್ಲೇ ಕುಳಿತುಕೊಂಡಿದಲ್ಲದೆ, ಸದಸ್ಯರನ್ನು ಬೆದರಿಸಿದ್ದಾರೆ ಎಂದು ನದೀಮ್ ಕುಟುಂಬಸ್ಥರು ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೂ, ದಿಲ್ಲಿ ಪೊಲೀಸರು ಹೇಳುವ ಎಫ್ ಐಆರ್ನಲ್ಲಿ ದಾಖಲಿಸಿಕೊಂಡಿರುವ ಎಲ್ಲ ಸೆಕ್ಷನ್ ಅಪರಾಧಗಳಿಗೆ ಮೂರು ವರ್ಷಗಳಿಗಿಂತ ಕಡಿಮೆಯಿರುವ ಶಿಕ್ಷೆಗಳಾಗಿವೆ. ಆದ್ದರಿಂದ ಇದಕ್ಕೆಲ್ಲ ನೋಟಿಸ್ ನೀಡಬೇಕಿದೆ. ಅದ್ಯಾವುದನ್ನೂ ದಿಲ್ಲಿ ಪೊಲೀಸರು ಪಾಲಿಸಿಲ್ಲ. ನವೆಂಬರ್ 29ರ ತಡರಾತ್ರಿ ದಿಲ್ಲಿಯಲ್ಲಿರುವ ಎಪಿಸಿಆರ್ ಕಚೇರಿಗೆ 20 ಪೊಲೀಸ್ ಅಧಿಕಾರಿಗಳು ನುಗ್ಗಲು ಯತ್ನಿಸಿದ್ದಾರೆ. ನದೀಮ್ ಮತ್ತು ತಮಗೆ ಪೊಲೀಸರು ಮಾನಸಿಕ ಹಿಂಸೆ ನೀಡಿದ್ದು, ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಬೆದರಿಕೆ, ಅತಿಕ್ರಮಣ, ಅಧಿಕಾರದ ದುರುಪಯೋಗ ನಡೆಸಿದ ದೆಹಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜೀವಕ್ಕೆ ಅಪಾಯವಾಗದಂತೆ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗವಾಗದಂತೆ ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಿ ಎಂದು ನದೀಮ್ ಖಾನ್ ಕುಟುಂಬಸ್ಥರು ಮನವಿ ಮಾಡಿದ್ದಾರೆ.