ಸಿಇಟಿ ಪರೀಕ್ಷೆ : ಮುಖ ಚಹರೆ ಆಪ್ನಿಂದ ನಕಲಿ ಅಭ್ಯರ್ಥಿ ಪತ್ತೆ, ತನಿಖೆಗೆ ಆದೇಶ
ಸಾಂದರ್ಭಿಕ ಚಿತ್ರ | PC: pexels
ಬೆಂಗಳೂರು : ಇಲ್ಲಿನ ಮಲ್ಲೇಶ್ವರದ 7ನೇ ಅಡ್ಡರಸ್ತೆಯ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಪ್ರಯತ್ನಿಸಿದ ಅಭ್ಯರ್ಥಿಯೊಬ್ಬರು ನಕಲಿ ಎಂಬುದನ್ನು ಕ್ಯೂಆರ್ ಕೋಡ್ ಆಧಾರಿತ ಮುಖ ಚಹರೆ ಪತ್ತೆಹಚ್ಚುವ ಆಪ್ ಗುರುತಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಅಭ್ಯರ್ಥಿಯೊಬ್ಬರು ಗುರುವಾರ ಬೆಳಗ್ಗೆ ಗಣಿತ ವಿಷಯ ಬರೆಯಲು ಬಂದವರು ನೇರವಾಗಿ ಶೌಚಾಲಯಕ್ಕೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ. ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊರ ಬಂದು ಕ್ಯೂಆರ್ ಕೋಡ್ ಇರುವ ಪ್ರವೇಶ ಪತ್ರ ತೋರಿಸಿ, ಒಳ ಹೋಗಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಮುಖ ಚಹರೆ ಪತ್ತೆ ಆಪ್ ಮೂಲಕ ಅವರ ಭಾವಚಿತ್ರ ತೆಗೆದಾಗ ಅವರು ನಕಲಿ ಎಂಬುದು ಗೊತ್ತಾಗಿದೆ.
ನಕಲಿ ಅಭ್ಯರ್ಥಿಯು ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಚಿತ್ರ ಅಂಟಿಸಿಕೊಂಡಿದ್ದರು. ಅಲ್ಲದೆ, ಪರೀಕ್ಷಾ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿದ್ದರು ಎಂಬುದು ಗೊತ್ತಾಗಿದೆ. ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ವಿಡಿಯೊ ದೃಶ್ಯ ಸಮೇತ ವರದಿ ನೀಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ನಕಲಿ ಅಭ್ಯರ್ಥಿಗಳ ಪತ್ತೆ ಸಲುವಾಗಿ ಕೆಇಎ ಆರಂಭಿಸಿರುವ ಈ ಹೊಸ ವ್ಯವಸ್ಥೆ ನಿಜಕ್ಕೂ ಅನುಕೂಲಕರವಾಗಿದ್ದು, ಎರಡನೇ ದಿನ ಕೂಡ ಸಂಪೂರ್ಣವಾಗಿ ಇದರ ಮೂಲಕವೇ ತಪಾಸಣೆ ಮಾಡಲಾಗಿದೆ. ಎಲಿಯೂ ಯಾವ ರೀತಿಯ ತಾಂತ್ರಿಕ ದೋಷಗಳು ಕಂಡುಬಂದಿಲ್ಲ ಎಂದು ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.