ಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ನಾಯಕರ ಹಿಂದೆ ಸುತ್ತಿ ಅಧಿಕಾರ ಹಿಡಿಯುವವರ ಬೆದರಿಕೆಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ. ನಮ್ಮ ಇತಿ-ಮಿತಿ ಅರಿತು ಜನಸೇವೆಗೆ ನಿಲ್ಲಬೇಕೆ ಹೊರತು, ನಾಯಕರ ಚೇಲಾಗಿರಿಗಲ್ಲ. ನಾನೆಂದಿಗೂ ಅವಕಾಶಗಳಿಗಾಗಿ ಬಕೆಟ್ ಹಿಡಿಯುವವನಲ್ಲ’ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಶನಿವಾರ ಬಹಿರಂಗ ಪತ್ರ ಬರೆದಿರುವ ಅವರು, ಬಿಜೆಪಿ ನನ್ನ ಯೋಗ್ಯತೆಯನ್ನು ಗುರುತಿಸಿ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನೇಮಿಸಿದೆ. ಅದನ್ನು ನೀರ್ಭಿತಿಯಿಂದ ನಿಭಾಯಿಸುತ್ತೇನೆ. 45 ವರ್ಷಗಳ ನನ್ನ ನಿಷ್ಕಳಂಕ ರಾಜಕೀಯ ಜೀವನದಲ್ಲಿ ವಹಿಸಿಕೊಂಡ ಮೊದಲ ಸಾಂವಿಧಾನಿಕ ಹುದ್ದೆಯಾಗಿದೆ. ನನ್ನ ರಾಜಕೀಯ ಜೀವನವೇ ಪ್ರಶ್ನಾತೀತವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಐಎಡಿಬಿ ನಿವೇಶನ ಮಂಜೂರಾತಿ ಪ್ರಕ್ರಿಯೆಯಲ್ಲಿ ಲೋಪಗಳು ಸಂಭವಿಸಿದೆ ಎಂದು ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಎರಡು ತಿಂಗಳ ಹಿಂದೆಯೇ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿಯ ಮತ್ತು ಸಿಎಂ ಸಿದ್ದರಾಮಯ್ಯರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗಮನ ಸೆಳೆದಿರುತ್ತಾರೆ. ನಾನು ಈ ವಿಚಾರದಲ್ಲಿ ವೈಯಕ್ತಿಕವಾಗಿ ಯಾರನ್ನು ಗುರಿ ಮಾಡುತ್ತಿರುವುದಿಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ಕೆಐಎಡಿಬಿಯಿಂದ ಯಾರು ಬೇಕಾದರೂ ಕೈಗಾರಿಕೆ ಉದ್ದೇಶಕ್ಕೆ ನಿವೇಶನ ಪಡೆಯಬಹುದು. ಅದೇ ರೀತಿಯಲ್ಲಿ ಮೈಸೂರಿನಲ್ಲಿ ಒಂದು ನಿವೇಶನವನ್ನು 2006-7ರಲ್ಲಿ ಬಿಜೆಪಿ-ಜೆಡಿಎಸ್ ಸರಕಾರದ ಅವಧಿಯಲ್ಲಿ ಹಣವನ್ನು ಪಾವತಿಸಿ ನಾನು ಕಾನೂನು ಬದ್ಧವಾಗಿ ಪಡೆದಿರುತ್ತೇನೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು 2016-17ರಲ್ಲಿ ದುರುದ್ದೇಶದಿಂದ ಹಿಂಪಡೆದಿರುತ್ತಾರೆ. ಬಳಿಕ ಕೋರ್ಟ್ ಮೂಲಕ ಆ ನಿವೇಶನವನ್ನು ಪಡೆದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.