ಮುಸ್ಲಿಮರನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಬಿಜೆಪಿಯು ದೇಶದ ಹಿತರಕ್ಷಣೆಗೆ ಆದ್ಯತೆ ಕೊಟ್ಟಿದೆ. ಅಧಿಕಾರ ಗಳಿಕೆ ಮುಖ್ಯವಲ್ಲ. ಇದನ್ನು ಅರಿತುಕೊಂಡರೆ ಎಲ್ಲವೂ ಸರಿಹೋಗಲಿದೆ ಎಂದು ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಮುಸ್ಲಿಮ್ ಬಂಧುಗಳನ್ನು ದಾರಿ ತಪ್ಪಿಸುತ್ತಿದೆ. ನಾವು ಮುಸ್ಲಿಮರ ಪರ ಎನ್ನುವ ಕಾಂಗ್ರೆಸ್ ಎಷ್ಟು ಮಂದಿ ಮುಸ್ಲಿಮರನ್ನು ಸಿಎಂ ಮಾಡಿದೆ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಮುಸ್ಲಿಮರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ಅವರ ಪರಿಸ್ಥಿತಿ ಗಮನಿಸಿದ್ದಾರಾ? ಅವರ ಕಾಲನಿಗಳಿಗೆ ಹೋಗಿದ್ದಾರಾ?. ಜೋಕರ್ ಗಳ ರೀತಿಯಲ್ಲಿ ಇಬ್ಬರನ್ನು ಮುಂದಿಟ್ಟು ಬಿಡುತ್ತಾರೆ. ಅವರಿಗೆ ಅಧಿಕಾರ ಕೊಡುತ್ತಾರೆ. ಅವರು ಇಡೀ ಸಮುದಾಯವನ್ನು ಗುತ್ತಿಗೆ ಪಡೆದವರಂತೆ ಆಡುತ್ತಿರುತ್ತಾರೆ. ದಲಿತರದೂ ಅದೇ ಸ್ಥಿತಿ ಎಂದು ಟೀಕಿಸಿದರು.
ಬಿಜೆಪಿ ಯಾರ ವಿರೋಧಿಯೂ ಅಲ್ಲ. ದೇಶ ಸುಭದ್ರವಾಗಿರಬೇಕು. ಜನರ ಸುರಕ್ಷತೆ ಮುಖ್ಯ ಎಂಬುದು ನಮ್ಮ ಉದ್ದೇಶ ಎಂದರು. ಬೇರೆಯವರು ಮೂಗು ತೂರಿಸುವುದನ್ನು ತಡೆಯಲು 370ನೆ ವಿಧಿಯನ್ನು ಜಮ್ಮು- ಕಾಶ್ಮೀರದಲ್ಲಿ ರದ್ದು ಪಡಿಸಲಾಗಿದೆ. ಬಿಜೆಪಿಯಲ್ಲಿ ಮುಸ್ಲಿಮರಿಗೆ ವಿಶ್ವಾಸ ಕಡಿಮೆ. ತಪ್ಪು ಅವರದಲ್ಲ. ಬಿಜೆಪಿಯದೂ ತಪ್ಪಲ್ಲ. ನಮಗೆ ವಿಷ ಹಾಕುವವರು ಯಾರು? ಯಾಕೆ ಎಂಬುದು ಅರಿವಾದರೆ ನಮ್ಮಲ್ಲಿ ಜಗಳ ಬರುವುದಿಲ್ಲ ಎಂದು ನುಡಿದರು.
‘ಬಿಜೆಪಿ ಎಂದರೆ ಅಲ್ಪಸಂಖ್ಯಾತರ ವಿರೋಧಿ, ನಿಮ್ಮನ್ನು ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಕಳುಹಿಸುತ್ತಾರೆ ಎನ್ನುತ್ತಾರೆ. ಇವೆಲ್ಲ ಆಗಲು ಸಾಧ್ಯವೆ?. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇದು 11ನೆ ವರ್ಷ. ನಿಮ್ಮನ್ನು ಯಾಕೆ ಬಿಜೆಪಿ ಪಾಕಿಸ್ತಾನಕ್ಕೆ ಕಳುಹಿಸಿಲ್ಲ. ಯಾರನ್ನು ಯಾರೂ ಕಳುಹಿಸಲು ಅಸಾಧ್ಯ. ನಿಮ್ಮನ್ನು ಅರಬಿ ಸಮುದ್ರದಲ್ಲಿ ಹಾಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಸಂಚಾಲಕ ಅಲ್ಲಾಬಕ್ಷ್ ತಿಮ್ಮಾಪುರ್ ಮಾತನಾಡಿ, ಈಗ ದೇಶದಲ್ಲಿ 18 ಕೋಟಿ ಸದಸ್ಯರಿದ್ದಾರೆ. 1980ರಲ್ಲಿ ಬಿಜೆಪಿ ಜನ್ಮ ತಾಳಿತು. ಅದಕ್ಕಿಂತ ಹಿಂದೆ ಜನಸಂಘ ಇತ್ತು. ಸುಖಕ್ಕಾಗಿ ಪಕ್ಷ ಮಾಡಿರಲಿಲ್ಲ. ಭಾರತಾಂಬೆಯ ವೈಭವಕ್ಕಾಗಿ ಪಕ್ಷ ಸೇವೆ ಮಾಡಿದ್ದರು. ಸದಸ್ಯತ್ವ ನೋಂದಣಿ ಒಂದು ಪ್ರಜಾಸತ್ತಾತ್ಮಕ ಕ್ರಮ. ನಮ್ಮದು ಜೀವಂತ ಪಕ್ಷ. ಬೇರೆ ಪಕ್ಷದಲ್ಲಿ ಸದಸ್ಯತ್ವ ನೋಂದಣಿಯ ಕ್ರಮ ಇಲ್ಲ ಎಂದು ತಿಳಿಸಿದರು. ನಮ್ಮ ಮೋರ್ಚಾಕ್ಕೆ 5 ಲಕ್ಷದ ಗುರಿ ಕೊಡಲಾಗಿದೆ ಎಂದರು.
ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಂ ಮಾತನಾಡಿ, ಬಿಜೆಪಿ ಬಗ್ಗೆ ಇತರ ಪಕ್ಷಗಳ ಮುಖಂಡರಲ್ಲಿ ಸಿಟ್ಟು, ದ್ವೇಷ ಭಾವನೆ ಇದೆ ಎಂದು ವಿವರಿಸಿದರು. ಭಾರತ್ ಮಾತಾಕೀ ಜೈ ಎಂದು ಹೇಳಿದ್ದನ್ನು ಆಕ್ಷೇಪಿಸಿದ್ದರು. ನಾನು ಆಗ ದೇಶವೆಂದರೆ ತಾಯಿ ಸಮಾನ ಎಂದು ಉತ್ತರ ಕೊಟ್ಟಿದ್ದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದರು.
ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅನಿಲ್ ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯಾಧ್ಯಕ್ಷ ಜಮಾಲ್ ಸಿದ್ದಿಕಿ, ರಾಷ್ಟ್ರೀಯ ಸಂಚಾಲಕ ಜೋಜೋ ಜೋಸೆಫ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಮಾಜಿ ಅಧ್ಯಕ್ಷ ಸೈಯದ್ ಸಲಾಂ, ಸಯ್ಯದ್ ಇಲ್ಯಾಸ್, ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್ ಜೈನ್, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.