ದ್ವೇಷ ಭಾಷಣ ಮಾಡಿದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಜರುಗಿಸಿ : ʼಜನಾಂದೋಲನʼ ಸಂಘಟನೆ ಒತ್ತಾಯ
ಚಂದ್ರಶೇಖರ ಸ್ವಾಮೀಜಿ
ಬೆಂಗಳೂರು: ಇಲ್ಲಿನ ಫ್ರೀಡಂಪಾರ್ಕ್ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯೊಂದರಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಸಂವಿಧಾನದ ಆಶಯಗಳ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಭಾಷಣ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದ್ವೇಷದ ಮಾತಿನ ವಿರುದ್ಧ ಜನಾಂದೋಲನ ಸಂಘಟನೆ ಒತ್ತಾಯಿಸಿದೆ.
ಶುಕ್ರವಾರದಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಂಘಟನೆಯು ಈ ಕುರಿತು ಪತ್ರ ಬರೆದಿದ್ದು, ಚಂದ್ರಶೇಖರ ಸ್ವಾಮೀಜಿಯು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಬಿತ್ತುವ ಮಾತುಗಳನ್ನಾಡಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ದ್ವೇಷಪೂರಿತ ಮತ್ತು ಪ್ರಚೋದಕ ಭಾಷಣವು ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಸಿದೆ.
ಸ್ವಾಮೀಜಿ ಭಾಷಣ ದ್ವೇಷವನ್ನು ಹೆಚ್ಚಿಸುತ್ತದೆ. ಕೋಮುಗಲಭೆಯೂ ನಡೆಯಬಹುದು. ಸಾರ್ವಜನಿಕವಾಗಿ ಮಾಡುವ ಭಾಷಣಗಳು, ಸಂವಿಧಾನದ ಆಶಯಗಳ ವಿರುದ್ಧ ಇರಬಾರದು. ಸಮುದಾಯಗಳ ನಡುವೆ ದ್ವೇಷ ಬೆಳೆಯುವಂತಹ ಭಾಷಣಗಳನ್ನು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವರು ಮಾಡಬಾರದು. ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಜಾತ್ಯತೀತ ರಾಷ್ಟ್ರದಲ್ಲಿ ಇಂತಹ ದ್ವೇಷ ಭಾವನೆಗಳಿಗೆ ಸ್ಥಾನವಿಲ್ಲ ಎಂದು ಹೇಳಿದರೂ, ದ್ವೇಷ ಭಾಷಣಗಳು ನಿಲ್ಲುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಮುಸಲ್ಮಾನರಿಗೆ ಮತ ಹಾಕುವ ಹಕ್ಕನ್ನು ಕಿತ್ತುಕೊಳ್ಳಬೇಕು ಎಂದು ಹೇಳುವುದು, ನಮ್ಮ ದೇಶಕ್ಕೆ ಅಪಾಯ. ಜಾತಿ, ಧರ್ಮ, ಲಿಂಗ ಎಲ್ಲವನ್ನು ಮೀರಿ ಸರ್ವರಿಗೂ ಮತ ಹಾಕುವ ಹಕ್ಕನ್ನು ನೀಡುವುದು ಸಂವಿಧಾನದ ಮೂಲ ಆಶಯವಾಗಿದೆ. ಹೀಗಾಗಿ ಒಂದು ಸಮುದಾಯಕ್ಕೆ ಮತ ಹಾಕುವ ಹಕ್ಕನ್ನು ಕಿತ್ತುಕೊಳ್ಳಬೇಕು ಎನ್ನುವುದು ಕಾನೂನುಬಾಹಿರ, ಸಂವಿಧಾನಕ್ಕೆ ಮಾಡುವ ಅವಮಾನವಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ಸ್ವಾಮೀಜಿ ಕೊಟ್ಟಿರುವ ಕ್ಷಮಾಪಣೆಯ ಹೇಳಿಕೆಯು ಆಗಿರುವ ದ್ವೇಷವನ್ನು ಅಳಿಸುವುದಿಲ್ಲ. ಹೀಗಾಗಿ ಇದನ್ನು ಪರಿಹರಿಸಲು ಯಾವ ಕಾನೂನಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂಬುದನ್ನು ಪೋಲಿಸ್ ಇಲಾಖೆ ತಿಳಿಸಬೇಕು. ವಿಚಾರಣೆ ಹಾಗು ತನಿಖಾ ಉದ್ದೇಶಗಳನ್ನು ಹೊರತುಪಡಿಸಿ, ಆಕ್ಷೇಪಾರ್ಹ ವೀಡಿಯೊ ಹಂಚಿಕೆ ಮತ್ತು ವೀಕ್ಷಣೆಗೆ ಲಭ್ಯ ಇರದ ಹಾಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಂಘಟನೆ ಗೃಹಸಚಿವರನ್ನು ಒತ್ತಾಯಿಸಿದೆ.
ದ್ವೇಷ ಭಾಷಣ ಹೆಚ್ಚುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು. ದ್ವೇಷದ ಭಾಷಣದ ಕಾನೂನು, ಸಾಮಾಜಿಕ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲು ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು. ಹಾಗೆಯೇ ಎಲ್ಲ ದ್ವೇಷದ ಭಾಷಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಸಂಘಟನೆ ಆಗ್ರಹಿಸಿದೆ.