ಪೂರ್ಣ ಬರ ಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ : ಮುಖ್ಯಮಂತ್ರಿ ಚಂದ್ರು
ಬೆಂಗಳೂರು : ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ರಾಜ್ಯಕ್ಕೆ ಕೇಂದ್ರ ಸರಕಾರ ಬರೋಬ್ಬರಿ 7 ತಿಂಗಳ ಬಳಿಕ 3,454 ಕೋಟಿ ರೂ.ಬರ ಪರಿಹಾರ ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ಬಿಡುಗಡೆಯಾಗುವವರೆಗೆ ಹೋರಾಟ ಮಾಡಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ಕೇಂದ್ರದ ಅಧ್ಯಯನ ತಂಡವೇ ರಾಜ್ಯವು ಬರಕ್ಕೆ ತುತ್ತಾಗಿದೆ ಎಂಬ ವರದಿ ಕೊಟ್ಟರೂ ನರೇಂದ್ರ ಮೋದಿ ಸರಕಾರ ಬರ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ರಾಜ್ಯ ಸರಕಾರ ನ್ಯಾಯಯುತ ಹೋರಾಟ ನಡೆಸಿ, ಕೇಂದ್ರದಿಂದ ಬರ ಪರಿಹಾರ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬರ ಪರಿಹಾರಕ್ಕಾಗಿ ಬೇಡಿಕೆ ಇಟ್ಟಾಗ ತಕ್ಷಣವೇ ಬರ ಪರಿಹಾರವನ್ನು ಕೇಂದ್ರ ಸರಕಾರ ನೀಡಿರುತ್ತಿದ್ದರೆ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‍ಗೆ ಹೋಗಿ ತನ್ನ ಹಕ್ಕನ್ನು ಪಡೆಯಬೇಕಾದ ಪ್ರಮೇಯವೇ ಇರುತಿರಲಿಲ್ಲ. ಸುಪ್ರೀಂ ಕೋರ್ಟ್‍ಗೆ ಹೋಗಿ ರಾಜ್ಯದ ಹಕ್ಕಿನ ಪರಿಹಾರ ತಂದ ರಾಜ್ಯ ಸರಕಾರವನ್ನು ನಾನು ಅಭಿನಂದಿಸುತ್ತೇನೆ. ರಾಜ್ಯ ಸರಕಾರದ ಈ ಕ್ರಮ ಇತರ ರಾಜ್ಯಗಳಿಗೂ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಎನ್‍ಡಿಆರ್ ಎಫ್ ನಿಯಮಾವಾಳಿ ಪ್ರಕಾರ ರಾಜ್ಯಕ್ಕೆ ಬಿಡುಗಡೆಯಾಗಬೇಕಿದುದ್ದು, 18,172 ಕೋಟಿ ರೂ.ಗಳಾಗಿವೆ. ಆದರೆ ಕೇಂದ್ರ ಸರಕಾರವು 3,454 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಕೇವಲ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆ ಹಣವಾಗಿದೆ. ಇಷ್ಟಕ್ಕೆ ವಿರಮಿಸದೆ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಬರಬೇಕಿರುವ ಎಲ್ಲ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ವರೆಗೆ ಹೋರಾಟ ನಡೆಸಬೇಕು. ರಾಜ್ಯದ ರೈತರಿಗಾಗಿ ಎಎಪಿ ಮೊದಲಿನಂತೆ ನಿಷ್ಪಕ್ಷಪಾತವಾಗಿ ನಿಮ್ಮ ಜೊತೆ ನಿಲ್ಲಲಿದೆ ಎಂದು ಅವರು ತಿಳಿಸಿದರು.