‘ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ’
ಫಲಾನುಭವಿಗಳಿಗೆ ಸಾಲ ಒದಗಿಸಲು ಬ್ಯಾಂಕ್ ಗಳ ಒಪ್ಪಿಗೆ: ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಒದಗಿಸುವ ಸಂಬಂಧ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಶನಿವಾರ ನಗರದಲ್ಲಿ ಬ್ಯಾಂಕ್ ಮುಖ್ಯಸ್ಥರ ಜತೆ ನಡೆಸಿದ ಸಭೆ ಫಲಪ್ರದವಾಗಿದೆ.
ಮೊದಲ ಹಂತದಲ್ಲಿ ಮೂರು ಸಾವಿರ ಜನರಿಗೆ ತಲಾ ಐದು ಲಕ್ಷ ರೂ.ಸಾಲ ನೀಡಲು ಬ್ಯಾಂಕ್ ಮುಖ್ಯಸ್ಥರು ಸಮ್ಮತಿ ಸೂಚಿಸಿದ್ದಾರೆ. ಮೊದಲ ಹಂತದಲ್ಲಿ ಸಾಲಕ್ಕಾಗಿ ಮೂರು ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, 316 ಜನರಿಗೆ ಸಾಲ ಮಂಜೂರು ಆಗಿದ್ದು, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಸ್ ಬ್ಯಾಂಕ್, ಇಂಡಿಯನ್ ಒವರ್ ಸೀಸ್ ಬ್ಯಾಂಕ್, ಐಐಎಫ್‍ಎಲ್ ಬ್ಯಾಂಕ್ ವತಿಯಿಂದ 15.80 ಕೋಟಿ ರೂ. ಮೊತ್ತದ ಚೆಕ್ ಗಳನ್ನು ಸಚಿವರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು.
ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಬರಲಿದ್ದು ಉತ್ತಮ ಮಾರುಕಟ್ಟೆ ಬೆಲೆ ಇದೆ. ಹೀಗಾಗಿ ಬ್ಯಾಂಕ್ ಗಳು ಪ್ಲಾಟ್ ಅಡಮಾನ ಇಟ್ಟುಕೊಂಡು ಸಾಲ ನೀಡಬಹುದು. ಹಂತ ಹಂತ ವಾಗಿ 45,125 ಫಲಾನುಭವಿಗಳಿಗೆ ಸಾಲ ಮಂಜೂರು ಆದರೆ ನಾವು ಯೋಜನೆ ತ್ವರಿತವಾಗಿ ಪೂರ್ಣ ಗೊಳಿಸಿ ಹಂಚಿಕೆ ಮಾಡಲಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ಉಪಸ್ಥಿತರಿದ್ದರು.