ಚನ್ನರಾಯಪಟ್ಟಣ ರೈತರ ನಿಯೋಗದಿಂದ ಮುಖ್ಯಮಂತ್ರಿ ಭೇಟಿ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ 13 ಹಳ್ಳಿಗಳ ವ್ಯಾಪ್ತಿಯಲ್ಲಿ 1777 ಎಕರೆ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದರಿಂದ ಹೊಸದಾಗಿ ಭೂಸ್ವಾಧೀನ ನಡೆಸಬಾರದು ಎಂದು ರೈತರ ನಿಯೋಗ ಮನವಿ ಮಾಡಿತು.
ರೈತರ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಆಗಿರುವ ಜಮೀನು ವಾಪಾಸ್ ಪಡೆಯಲು ಸಾಧ್ಯವಿಲ್ಲ. ಸರಕಾರ ರೈತರ ಪರವಾಗಿದ್ದು ಈ ವಿಷಯದ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆದುಕೊಂಡು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಚನ್ನರಾಯಪಟ್ಟಣ ‘ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಾವಿರ ದಿನ’
ಕೈಗಾರಿಕೆ ಉದ್ದೇಶಕ್ಕೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ’ವು ಇದೇ ಡಿಸೆಂಬರ್ 30ಕ್ಕೆ ಸಾವಿರ ದಿನಗಳು ತುಂಬುತ್ತಿವೆ.
ಈ ರೈತ ಹೋರಾಟವನ್ನು ನಿರ್ಲಕ್ಷಿಸುತ್ತಿರುವ ಸರಕಾರದ ಧೋರಣೆಯನ್ನು ವಿರೋಧಿಸಿ ಫಲವತ್ತಾದ ಕೃಷಿ ಭೂಮಿ ಉಳಿವಿಗಾಗಿ ಚನ್ನರಾಯಪಟ್ಟಣದಿಂದ ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯ ವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
2021ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 3(1)ರನ್ವಯ ಅಧಿಸೂಚನೆಯ ಪ್ರಕಾರ ದೇವನಹಳ್ಳಿ ತಾಲೂಕಿನ, ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೊಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಪ್ರೋತ್ರಿಯ ತೆಲ್ಲೋಹಳ್ಳಿ ಮತ್ತು ಹ್ಯಾಡಾಳ ಈ 13 ಗ್ರಾಮಗಳ, 1,777 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ನೋಟೀಸ್ ನೀಡಿತ್ತು.
ಇದೇ ಭೂಮಿಯಲ್ಲಿ, ಸುಮಾರು 1ಸಾವಿರ ಟನ್ ರಾಗಿ ಮತ್ತಿತರ ಆಹಾರ ಧನ್ಯಗಳು, 2ಸಾವಿರ ಟನ್ ದ್ರಾಕ್ಷಿ, 100-150ಟನ್ ಮಾವು ಮುಂತಾದ ಹಣ್ಣಿನ ಬೆಳೆಗಳು ಸೇರಿದಂತೆ ತರಕಾರಿ ಮತ್ತು ಹೂವು ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು ಇಲ್ಲಿನ ಜನಕ್ಕೆ ಆಹಾರ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿದೆ. ಇದೇ ಹಳ್ಳಿಗಳಲ್ಲಿ ಪ್ರತಿದಿನ 6-8 ಸಾವಿರ ಲೀ.ಹಾಲಿನ ಉತ್ಪಾದನೆಯಾಗುತ್ತಿದೆ ಮತ್ತು ಗುಣಮಟ್ಟದ ರೇಷ್ಮೆ ಗೂಡು ಮತ್ತು ಬೆಂಗಳೂರು ನೀಲಿದ್ರಾಕ್ಷಿ ಉತ್ಪಾದನೆ ಆಗುತ್ತಿದೆ.
ಈ ಸ್ವಾಧೀನ ಪ್ರಕ್ರಿಯೆಯಿಂದ 387 ಕುಟುಂಬಗಳು ಸಂಪೂರ್ಣ ಭೂ ರಹಿತರಾಗಲಿದ್ದು, ಈ ಕುಟುಂಬಗಳಿಗೆ ಸೇರಿದ 2,989 ಜನಸಂಖ್ಯೆ ಭೂ ರಹಿತರಾಗಲಿದ್ದಾರೆ. ಇಲ್ಲಿನ ಸ್ಥಳೀಯ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇಂದಿಗೂ ಕೃಷಿಯನ್ನು ನಂಬಿಕೊಂಡು ಕನಿಷ್ಠ 6 ಸಾವಿರ ಜನ ಬದುಕುತ್ತಿದ್ದಾರೆ.
ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೆಐಎಡಿಬಿ ಭೂ ಸ್ವಾಧಿನವನ್ನು ವಿರೋಧಿಸಿ, ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಸಾವಿರ ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರೈತರು ಬೀದಿಯಲ್ಲಿ ಕುಳಿತು ವರ್ಷಗಳೇ ಕಳೆದರೂ ಬೇಜವಾಬ್ದಾರಿ ರೈತ ವಿರೋಧಿ ಸರಕಾರಗಳು ಮಾತ್ರ ಸಮಸ್ಯೆಯನ್ನು ಬಗೆಹರಿಸದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ.
ಈ ಗ್ರಾಮಗಳ ಸರಹದ್ದಿನ 5 ಕಿ.ಮಿ. ಸುತ್ತಳತೆಯಲ್ಲಿ ಅಧಿಸೂಚನೆ ಹೊರಡಿಸಿರುವ 13 ಗ್ರಾಮಗಳು ಇದ್ದು, 2018-19ರಲ್ಲಿ ಏರೋಸ್ಪೇಸ್ ಆಂಡ್ ಡಿಫೆನ್ಸ್ ಪಾರ್ಕ್(ಎರಡನೆ ಹಂತ)ಕ್ಕಾಗಿ 1,300 ಎಕರೆ ಸ್ವಾಧೀನವಾಗಿದೆ. ಇದಲ್ಲದೆ, ಇದೇ ಚನ್ನರಾಯಪಟ್ಟನ ಹೋಬಳಿಯಲ್ಲಿ, ವಿಮಾನ ನಿಲ್ದಾಣ, ಎರೋಸ್ಪೇಸ್ ಅಂಡ್ ಡಿಫೆನ್ಸ್ ಪಾರ್ಕ್ (ಮೊದಲ ಹಂತ), ಏರೋಸ್ಪೇಸ್ ಸೇರಿದಂತೆ 4ನೆ ಭಾರಿಗೆ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 6 ಸಾವಿರ ಎಕರೆ ಈಗಾಗಲೇ ಸ್ವಾಧೀನವಾಗಿ ಈಗ ಗ್ರಾಮದ ವಾಸಯೋಗ್ಯ ಪ್ರದೇಶ ಕಡಿಮೆಯಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದ ವೇಳೆ ಧರಣಿ ನಡೆಸುತ್ತಿದ್ದ ವೇದಿಕೆಗೆ ಬಂದು, ಫಲವತ್ತಾದ ಕೃಷಿ ಭೂಮಿಗಳಲ್ಲಿ ಕೈಗಾರಿಕೆಗಳು ಮಾಡುವುದು ಸಲ್ಲ, ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿ ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಪಾಲಾಗಲು ಬಿಡುವುದಿಲ್ಲ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದರು.
ಈಗಲಾದರು ಚನ್ನರಾಯಪಟ್ಟಣ ಹೋಬಳಿಯ ಸಣ್ಣ, ಅತಿಸಣ್ಣ, ದಲಿತರ ಹಿಂದುಳಿದ ಸಮುದಾಯಗಳ 1777ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈ ಬಿಟ್ಟು, ತಮ್ಮನ್ನು ತಾವು ಮಾತಿಗೆ ತಪ್ಪದ ಮುಖ್ಯಮಂತ್ರಿ ಎಂದು ಸಾಭೀತು ಪಡಿಸಿಕೊಳ್ಳಲಿ ಎಂದು ರೈತರು ಆಗ್ರಹಿಸಿದ್ದಾರೆ.