10 ವರ್ಷಗಳ ವಕ್ಫ್ ಬೋರ್ಡ್ ಆಡಳಿತದ ಕುರಿತು ಸಿಐಡಿ ತನಿಖೆ ನಡೆಸಲಿ : ಸಿ.ಎಂ.ಇಬ್ರಾಹೀಂ

ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಕೋಟ್ಯಂತರ ರೂಪಾಯಿಗಳನ್ನು ಮತ ಖರೀದಿಗೆ ಬಳಸಿದ ಶಂಕೆ ವ್ಯಕ್ತವಾಗುತ್ತಿದೆ. ಆದುದರಿಂದ, ಕಳೆದ 10 ವರ್ಷಗಳ ವಕ್ಫ್ ಬೋರ್ಡ್ ಆಡಳಿತದ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಆಗ್ರಹಿಸಿದ್ದಾರೆ.
ಬುಧವಾರ ನಗರದ ಬೆನ್ಸನ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆಯಾಗಿ ನಿಗದಿಯಾಗಿದ್ದ ಚುನಾವಣೆಯನ್ನು ಏಕಾಏಕಿ ಮುಂದೂಡಲಾಗಿದೆ. ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ನನ್ನ ಸ್ನೇಹಿತರು. ಅವರ ರಾಜಕೀಯ ಪ್ರವೇಶಕ್ಕೂ ನಾನು ಕಾರಣನಾಗಿದ್ದೇನೆ. ಸಮಾಜಕ್ಕಾಗಿ ಅವರು ಏನಾದರೂ ಒಳ್ಳೆಯದು ಮಾಡಲು ಬಯಸಿದರೆ, ಮೊದಲು ಕಳೆದ 10 ವರ್ಷಗಳ ವಕ್ಸ್ ಬೋರ್ಡ್ ಆಡಳಿತದ ಕುರಿತು ಸಿಐಡಿ ತನಿಖೆಗೆ ಆದೇಶಿಸಲಿ ಎಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್ ಚುನಾವಣೆಗಳ ಕುರಿತು ಜನತೆಯ ಮುಂದೆ ಸ್ಪಷ್ಟ ಚಿತ್ರಣ ಬರಬೇಕು. ಹಲವಾರು ಹಿರಿಯ ನಾಯಕರು ಮತ್ತು ಜನಸಾಮಾನ್ಯರು ನನ್ನ ಬಳಿ ಬಂದು ವಕ್ಫ್ ಬೋರ್ಡ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಮಾಡಿರುವ ಆರೋಪಗಳನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ರಾಜಕೀಯದಲ್ಲಿ ಭ್ರಷ್ಟಾಚಾರದ ಆರೋಪ ಸಾಮಾನ್ಯ. ಆದರೆ, ಮಸೀದಿ, ಸ್ಮಶಾನ, ದರ್ಗಾಗಳ ಹಣದಲ್ಲೂ ದುರ್ಬಳಕೆ ನಡೆಯುತ್ತಿದ್ದರೆ, ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಇಬ್ರಾಹೀಂ ಹೇಳಿದರು.
ನಮ್ಮ ಸಮುದಾಯದ ಮಕ್ಕಳಿಗೆ ಉಚಿತವಾಗಿ 12ನೇ ತರಗತಿವರೆಗೆ ಶಿಕ್ಷಣ ದೊರಕಬೇಕು. ನಾನು ಇದಕ್ಕಾಗಿ ಯೋಜನೆ ರೂಪಿಸಿದ್ದೇನೆ. ಸರಕಾರ ಈ ಯೋಜನೆಯನ್ನು ಅನುಸರಿಸಿದರೆ, ಮುಂದಿನ 10 ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಯಾರೊಬ್ಬರೂ ಅನಕ್ಷರಸ್ಥರಾಗಿರುವುದಿಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದಲೇ ಶಾಲೆಗಳನ್ನು ನೇರವಾಗಿ ನಡೆಸಬೇಕು. ಅಲ್ಲಿ ಶಿಕ್ಷಣದ ಜೊತೆಗೆ ಸದಾಚಾರವೂ ಕಲಿಸಬೇಕು ಎಂದು ಇಬ್ರಾಹೀಂ ಸಲಹೆ ನೀಡಿದರು.
ನಮ್ಮ ಹಕ್ಕು ಮತ್ತು ರಾಜಕೀಯ ಭವಿಷ್ಯ: ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಆದರೆ, ಸರಕಾರ ಇದನ್ನು ಅಧಿಕೃತಗೊಳಿಸಲು ವಿಳಂಬ ಮಾಡುತ್ತಿದೆ. ನಾವು ನಮ್ಮ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಬೇಕಾಗಿದೆ. ಕಾಂಗ್ರೆಸ್ ನಮಗೆ ನ್ಯಾಯ ನೀಡುವುದಾದರೆ ಅದನ್ನು ಬೆಂಬಲಿಸಬಹುದು. ಇಲ್ಲದಿದ್ದರೆ, ನಾವು ನಮ್ಮದೇ ಆದ ಮೂರನೇ ರಾಜಕೀಯ ಶಕ್ತಿಯನ್ನು ನಿರ್ಮಿಸಬೇಕಾಗುತ್ತದೆ ಎಂದು ಅವರು ಹೇಳಿದರು.