ಶಿವಾಜಿನಗರದ ಬೆಸಿಲಿಕಾ ಚರ್ಚ್ನ ಪುನರುಜ್ಜೀವನಕ್ಕೆ ಐದು ಕೋಟಿ ರೂ.ನೆರವು : ಸಿಎಂ ಸಿದ್ದರಾಮಯ್ಯ ಭರವಸೆ
ಬೆಂಗಳೂರು : ಇಲ್ಲಿನ ಶಿವಾಜಿನಗರದ ಬೆಸಿಲಿಕಾ ಚರ್ಚ್ನ ಪುನರುಜ್ಜೀವನಕ್ಕೆ ಐದು ಕೋಟಿ ರೂಪಾಯಿಗಳ ನೆರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ರವಿವಾರ ಇಲ್ಲಿನ ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚಚ್ನಲ್ಲಿ ನಡೆದ ಸೇಂಟ್ ಮೇರಿ ಅಮ್ಮನ ಹುಟ್ಟು ಹಬ್ಬದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಸಿಲಿಕಾ ಚರ್ಚ್ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲ ಜಾತಿ-ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಈ ಮಂದಿರದ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂದರು.
ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ. ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು. ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಸಿದ್ದರಾಮಯ್ಯ ಇದೇ ವೇಳೆ ಕರೆ ನೀಡಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮ ಗುರುಗಳ ಮತ್ತು ಸಂಸ್ಥೆಗಳ ಕೊಡುಗೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ. ಇವರ ಈ ಸಾಮಾಜಿಕ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್, ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.