ಬಿಜೆಪಿಯವರು ಎಂದೂ ಸತ್ಯ ಹೇಳುವುದಿಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ‘ಪ್ರತಿಪಕ್ಷ ಬಿಜೆಪಿಯವರು ಯಾವತ್ತೂ ಸತ್ಯ ಹೇಳುವುದಿಲ್ಲ. ಬರೇ ಸುಳ್ಳೇ ಹೇಳುವುದು. ವಿವಾದ ಇಲ್ಲದಿದ್ದರೂ ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ವಿಚಾರದಲ್ಲಿ ಏನಾದರೂ ವಿವಾದ ಇದೆಯೇ?. ಆದರೆ, ಬಿಜೆಪಿಯವರು ಸುಖಾಸುಮ್ಮನೆ ವಿವಾದವಲ್ಲದ ವಿಷಯವನ್ನು ವಿವಾದ ಸೃಷ್ಟಿಸಿದರು. ಈಗ ವಕ್ಫ್ ಆಸ್ತಿ ವಿಷಯದಲ್ಲೂ ಹಾಗೆಯೇ ಮಾಡುತ್ತಿದ್ದಾರೆ ಎಂದು ದೂರಿದರು.
ವಕ್ಫ್ ನೋಟೀಸ್ ಸಂಬಂಧ ಬಿಜೆಪಿಯವರು ರಾಜಕೀಯ ಉದ್ದೇಶದಿಂದ ನ.4ರಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಸುಮಾರು 200ಕ್ಕೂ ಅಧಿಕ ನೋಟೀಸ್ ಕೊಟ್ಟಿದ್ದರಲ್ಲಾ?. ಅದಕ್ಕೆ ಈಗ ಅವರು ಏನು ಹೇಳುತ್ತಾರೆ. ಈ ಬಗ್ಗೆ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಈಗಾಗಲೇ ರೈತರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಲು ನಾನು ಹೇಳಿದ್ದೇನೆ. ಈಗ ಏನಿದೆ ವಿವಾದ?, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದೂ ಹೇಳಿದ್ದೇವೆ. ಯಾವ ಜಿಲ್ಲೆಯಲ್ಲಾದರೂ ಆಗಿರಲಿ. ಬಿಜೆಪಿ ಅವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ರೈತರಿಗೆ ನೋಟೀಸ್ ಕೊಟ್ಟಿದ್ದರು ಎಂದು ಸಿದ್ದರಾಮಯ್ಯ ದೂರಿದರು.
ನಾನು ನ.4ರಿಂದ ನ.11ರ ವರೆಗೆ ಉಪಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಸೇರಿ ಮೂರು ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ನಾವು ಶಿಗ್ಗಾಂವಿಯಲ್ಲೂ ಗೆಲ್ಲುತ್ತೇವೆ, ಸಂಡೂರಲ್ಲೂ ಗೆಲ್ಲುತ್ತೇವೆ. ಚನ್ಬಪಟ್ಟಣದಲ್ಲೂ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.