ಕರ್ನಾಟಕ ಭವನ ರಾಯಭಾರಿ ಕಚೇರಿಯಾಗಿ ಕೆಲಸ ಮಾಡಲಿ: ಸಿಎಂ ಸಿದ್ದರಾಮಯ್ಯ
ಕರ್ನಾಟಕ ಭವನ-1ರ ಕಟ್ಟಡ ಲೋಕಾರ್ಪಣೆ

ಹೊಸದಿಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸೇರಿ ದೇಶ ಮತ್ತು ರಾಜ್ಯಗಳನ್ನು ಅಭಿವೃದ್ಧಿಪಡಿಸಬೇಕೆಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ದಿಲ್ಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಭವನ-1ರ ಕಟ್ಟಡವನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಯಾವುದೇ ರಾಜ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಂದ ತೆರಿಗೆಯನ್ನು ವಸೂಲು ಮಾಡುತ್ತವೆ. ಐದು ವರ್ಷಕ್ಕೊಮ್ಮೆ ರಚನೆಯಾಗುವ ಹಣಕಾಸಿನ ಆಯೋಗದ ಶಿಫಾರಸಿನಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತೆರಿಗೆಯ ಪಾಲು ನಿಗದಿಯಾಗುತ್ತದೆ. ಅನುದಾನದಲ್ಲಿ ಕೇಂದ್ರ ಸರಕಾರದ ಅನೇಕ ಕಾರ್ಯಕ್ರಮಗಳೂ ಸೇರಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳೂ ಇರುತ್ತವೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ಇರುತ್ತದೆ ಎಂದರು.
ಕರ್ನಾಟಕ ಭವನದಲ್ಲಿ ಗುರುವಾರದಿಂದಲೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ತಿಳಿಸಿದರು.
ಕರ್ನಾಟಕ ಭವನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಯಭಾರಿ ಕಚೇರಿಯಾಗಿ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಹಾರೈಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಅಭಿವೃದ್ಧಿಯಾಗಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಸ್ಪರ ಅಭಿವೃದ್ಧಿಯಾದಾಗ ದೇಶ ಅಭಿವೃದ್ಧಿಯಾಗುತ್ತದೆ. ಈ ದಿಕ್ಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟುಗೂಡಿ ಕೆಲಸ ಮಾಡಲು ಪ್ರಯತ್ನ ಮಾಡಬೇಕು. ನಾವು ಒಕ್ಕೂಟದ ವ್ಯವಸ್ಥೆಯಲ್ಲಿರುವುದರಿಂದ ಒಟ್ಟಾಗಿ ಅಭಿವೃದ್ಧಿಯಾಗುವುದು ಅಗತ್ಯ. ಈ ದಿಕ್ಕಿನತ್ತ ಸಚಿವರು, ಅಧಿಕಾರಿಗಳು ಪ್ರಯತ್ನ ಮಾಡಬೇಕು. ಕರ್ನಾಟಕ ಭವನ-2 ರ ನವೀಕರಣ ಮಾಡುವ ಅಗತ್ಯವಿದ್ದು, ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಮಹದೇವಪ್ಪ, ರಾಜಣ್ಣ, ಕೆ.ಎಚ್.ಮುನಿಯಪ್ಪ ಮತ್ತಿತರರು ಹಾಜರಿದ್ದರು