ಕೆ.ಕಸ್ತೂರಿ ರಂಗನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಕೆ. ಕಸ್ತೂರಿ ರಂಗನ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಖಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ ಎಂದು ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಕರ್ನಾಟಕ ಮೂಲದ ಡಾ.ಕಸ್ತೂರಿ ರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ.
ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ಸಿಎಂ ತಿಳಿಸಿದ್ದಾರೆ.
‘ಇಸ್ರೋ ಮಾಜಿ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಕೆ.ಕಸ್ತೂರಿ ರಂಗನ್ ನಿಧನದ ಸುದ್ದಿ ತಿಳಿದು ದುಃಖವಾಯಿತು. 1994ರಿಂದ 2003ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷರಾಗಿ, ಬಳಿಕ ಯೋಜನಾ ಆಯೋಗದ ಸದಸ್ಯರಾಗಿ, ಭಾರತೀಯ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’
-ಆರ್.ಅಶೋಕ್ ವಿಪಕ್ಷ ನಾಯಕ
‘ಇಸ್ರೋ ಸಂಸ್ಥೆಯನ್ನು 9ವರ್ಷ ಮುನ್ನಡೆಸಿದ್ದ ಕಸ್ತೂರಿ ರಂಗನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅನೇಕ ದಿಗ್ವಿಜಯಗಳ ಹಿಂದಿನ ಶಕ್ತಿ ಆಗಿದ್ದರು. ಬೆಂಗಳೂರು ನಗರದ ಜತೆ ಭಾವನಾತ್ಮಕ ಬೆಸುಗೆ ಹೊಂದಿದ್ದರು. ಪರಿಸರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಅಪರಿಮಿತ ಕೊಡುಗೆ ನೀಡಿದ್ದರು. ರಾಜ್ಯಸಭೆ ಸದಸ್ಯರಾಗಿ ದೇಶದ ಮಹತ್ವಪೂರ್ಣ ನೀತಿಗಳನ್ನು ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ಅಗಲಿಕೆ ರಾಷ್ಟ್ರಕ್ಕೆ ಬಹುದೊಡ್ಡ ನಷ್ಟ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ