ನಾಳೆ ಹೊಸದಿಲ್ಲಿಗೆ ಸಿಎಂ ಭೇಟಿ : ನಂದಿ ಉತ್ಪನ್ನಗಳ ಬಿಡುಗಡೆ
ಸಿದ್ದರಾಮಯ್ಯ
ಬೆಂಗಳೂರು : ಕೆಎಂಎಫ್ ಹಾಗೂ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಜಂಟಿಯಾಗಿ ಗುರುವಾರ(ನ.21) ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿನ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಂದಿನಿ ಹಾಲಿನ ವಿವಿಧ ಉತ್ಪನ್ನ’ಗಳನ್ನು ಅನಾವರಣಗೊಳಿಸಲಿದ್ದಾರೆ.
ಗುರುವಾರ ಬೆಳಗ್ಗೆ 9 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಂಎಫ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆನಂತರ ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ.
ನಬಾರ್ಡ್ ಸಾಲದ ಮೊತ್ತ ಹೆಚ್ಚಳಕ್ಕೆ ಮನವಿ :
ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು ಕಳೆದ ವರ್ಷದ 5,600 ಕೋಟಿ ರೂ.ಗಳಿಂದ, ಈ ವರ್ಷ 2,340 ಕೋಟಿ ರೂ. ಗಳಿಗೆ ಇಳಿಸಲಾಗಿದೆ. ಈ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ಮಧ್ಯೆ ಸಮಯಾವಕಾಶವಿದ್ದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಂದು ಸಂಜೆ 5 ಗಂಟೆಗೆ ಇಂದಿರಾಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.