ಮತ ಎಣಿಕೆ | ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ : ಪೊಲೀಸ್ ಆಯುಕ್ತ ದಯಾನಂದ್
ಬೆಂಗಳೂರು : ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ(ಜೂ.4) ನಡೆಯಲಿದ್ದು, ಬೆಂಗಳೂರು ನಗರದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ರವಿವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಯು ಆಯಾ ಕೇಂದ್ರಗಳಲ್ಲಿ ನಡೆಯಲಿದ್ದು, ಪ್ರತಿಯೊಂದು ಕೇಂದ್ರದಲ್ಲೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಸೂಕ್ತ ಭದ್ರತೆ ಮಾಡಲಾಗಿದೆ ಎಂದು ಹೇಳಿದರು.
ಮತದಾನ ಮುಗಿದ ನಂತರ ಆಯಾ ಕ್ಷೇತ್ರದ ಎಲ್ಲ ಮತಯಂತ್ರಗಳನ್ನೂ ಮತ ಎಣಿಕಾ ಕೇಂದ್ರಕ್ಕೆ ತಂದಿಡಲಾಗಿದ್ದು, ಸ್ಥಳೀಯ ಪೊಲೀಸರ ಜತೆ ಕೇಂದ್ರ ಪಡೆಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಒಂದು ಮತ ಎಣಿಕಾ ಕೇಂದ್ರಕ್ಕೆ ಒಬ್ಬರು ಡಿಸಿಪಿ, ಮೂರು ಮಂದಿ ಎಸಿಪಿಗಳು, ಐದು ಮಂದಿ ಇನ್‍ಸ್ಪೆಕ್ಟರ್ ಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದೆ ಎಂದು ಬಿ.ದಯಾನಂದ್ ವಿವರಿಸಿದರು.
ಜೂ.4ರ ಮಂಗಳವಾರ ನಗರದ ಎಲ್ಲ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬಿ.ದಯಾನಂದ್ ತಿಳಿಸಿದರು.