ಬೆಂಗಳೂರು| ವಿಶೇಷಚೇತನ ವ್ಯಕ್ತಿಯ ಅಂಗಡಿ ನೆಲಸಮ: ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ದೂರು
ಬೆಂಗಳೂರು: ವಿಶೇಷಚೇತನ ವ್ಯಕ್ತಿಯೊಬ್ಬರ ಅಂಗಡಿ ಪಾದಚಾರಿ ಮಾರ್ಗದಲ್ಲಿದೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ದೊಮ್ಮಲೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಎಇಇ) ಮೂರ್ತಿ ಎಂಬವರು ಯಾವುದೆ ಸಮೀಕ್ಷೆ ನಡೆಸದೆ ಜೆಸಿಬಿಯೊಂದಿಗೆ ಬಂದು ಅಂಗಡಿಯನ್ನು ನೆಲಸಮಗೊಳಿಸಿದ್ದಾರೆ ಎಂದು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ಟಿನ್ ಟೌನ್ನ ಗ್ಯಾಂಗ್ಮನ್ ಕ್ವಾರ್ಟಸ್ ನಿವಾಸಿಯಾಗಿರುವ ವಿಶೇಷಚೇತನ ನಿತ್ಯಾನಂದನ್ ಎಂಬವರು ತಮ್ಮ ಜೀವನಾಧಾರಕ್ಕಾಗಿ ಬ್ಯಾಟರಿ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರ ಅಂಗಡಿಯ ಪರವಾನಗಿ ನವೀಕರಣಗೊಳಿಸಲು ಬಿಬಿಎಂಪಿ ಮೊರೆ ಹೋಗಿದ್ದರು. ಆದರೆ, ಅಂಗಡಿಯು ಪಾದಚಾರಿ ಮಾರ್ಗದಲ್ಲಿದೆ ಎಂದು ಬಿಬಿಎಂಪಿ ಪ್ರತಿಪಾದನೆ ಮಾಡಿತ್ತು.
ಈ ಸಂಬಂಧ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿ ಪ್ರಸಕ್ತ ಸಾಲಿನ ಜು.4ರಂದು ನೀಡಿರುವ ಆದೇಶದಲ್ಲಿ ಅಂಗಡಿಯು ರಸ್ತೆಯಿಂದ 1.2 ಮೀಟರ್ ಮತ್ತು ಪೂರ್ವಕ್ಕೆ ರಸ್ತೆಯಿಂದ 3 ಮೀಟರ್ ಪಾದಚಾರಿ ಮಾರ್ಗ ಇರುವಂತೆ ಸೂಚಿಸಿದೆ. ಅದರಂತೆ ಒತ್ತುವರಿ ತೆರವುಗೊಳಿಸಿ ಅಂಗಡಿಯನ್ನು ಮಾರ್ಪಡಿಸಲಾಗಿದೆ
ಈ ಸಂಬಂಧ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಚೇರಿಯ ಆಯುಕ್ತರು, ಬಿಬಿಎಂಪಿ ಆಯುಕ್ತರು, ದೊಮ್ಮಲೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು, ನಿತ್ಯಾನಂದನ್ ಅವರಿಗೆ ಬ್ಯಾಟರಿ ಅಂಗಡಿ ವ್ಯಾಪಾರ ಮಾಡಿಕೊಂಡು ಹೋಗಲು ಪರವಾನಗಿಯನ್ನು ನವೀಕರಣ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.
ಆದರೂ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೈಕೋರ್ಟ್ ಆದೇಶ ಹಾಗೂ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರ ಸೂಚನೆಗೂ ಮನ್ನಣೆ ನೀಡಿದೆ, ನನ್ನ ಪರವಾನಗಿಯನ್ನು ನವೀಕರಣಗೊಳಿಸದೆ, ಏಕಾಏಕಿ ಬಂದು ನನ್ನ ಅಂಗಡಿ ನೆಲಸಮಗೊಳಿಸಿದ್ದಾರೆ ಎಂದು ನಿತ್ಯಾನಂದನ್ ದೂರು ನೀಡಿದ್ದಾರೆ.