ಬಾಲಕೃಷ್ಣ ಶಾಸಕತ್ವ ರದ್ದು ಮಾಡಲು ಚುನಾವಣಾ ಆಯೋಗಕ್ಕೆ ಜೆಡಿಎಸ್ ನಿಂದ ದೂರು
ಬೆಂಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಲು ಚರ್ಚಿಸುತ್ತೇನೆ’ ಎಂಬ ಹೇಳಿಕೆ ನೀಡಿದ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಸದಸ್ಯತ್ವ ರದ್ದು ಮಾಡಬೇಕೆಂದು ಆಗ್ರಹಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.
ಶುಕ್ರವಾರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಿಯೋಗ, ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾರನ್ನು ಭೇಟಿ ಮಾಡಿ ದೂರು ನೀಡಿತು. ಬಾಲಕೃಷ್ಣ ಹೇಳಿಕೆ, ಸಾರ್ವಜನಿಕರಿಗೆ ಬೆದರಿಕೆ ಮತ್ತು ಅವರ ಮತದಾನದ ನಡವಳಿಕೆಯನ್ನು ಭ್ರಷ್ಟಗೊಳಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಜೆಡಿಎಸ್ ತಿಳಿಸಿದೆ.
ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಅಥವಾ 1951ರ ಜನತಾ ಪ್ರಾತಿನಿಧ್ಯ ಕಾಯಿದೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಆ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡುವ ಅಧಿಕಾರವನ್ನು ಆಯೋಗವು ಹೊಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಬಾಲಕೃಷ್ಣ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಚ್.ಸಿ.ಬಾಲಕೃಷ್ಣ ಹೇಳಿಕೆಯು ಸಂವಿಧಾನ ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸಂಪೂರ್ಣ ಉಲ್ಲಂಘನೆ. ನಾನು ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‍ನ ಮಾನ್ಯತೆಯನ್ನು ರದ್ದು ಮಾಡಲು ಒತ್ತಾಯಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ಪೂರ್ವಾನುಮತಿ ಇಲ್ಲದೆ ಅವರು ಹೇಳಿಕೆ ನೀಡಿರುವ ಸಾಧ್ಯತೆ ಇಲ್ಲ. ಇಂತಹ ವರ್ತನೆಯನ್ನು ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆ ಪಕ್ಷದ ಶಾಸಕರಾದ ಸುರೇಶ್ ಬಾಬು, ಕರೆಮ್ಮ ನಾಯಕ್, ಎಚ್.ಟಿ.ಮಂಜುನಾಥ, ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.