‘ಒಳಮೀಸಲಾತಿ’ ಮಧ್ಯಂತರ ವರದಿ ನೀಡಲು ಒತ್ತಾಯ

ಬೆಂಗಳೂರು : ಪರಿಶಿಷ್ಟರ ಒಳಮೀಸಲಾತಿ ಸಂಬಂಧ ಸರಕಾರ ರಚಿಸಿರುವ ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಕೂಡಲೇ ಮಧ್ಯಂತರ ವರದಿ ನೀಡಬೇಕು ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಸಮಿತಿ’ಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ನ್ಯಾ.ನಾಗಮೋಹನ್‍ದಾಸ್ ಅವರನ್ನು ಭೇಟಿ ಮಾಡಿದ ಒಕ್ಕೂಟದ ನಿಯೋಗ ಮನವಿ ಸಲ್ಲಿಸಿದ್ದು, ರಾಜ್ಯ ಸರಕಾರ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ರೀತಿತಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಬೇಕು. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ‘ಪ್ರಾಯೋಗಿಕ ದತ್ತಾಂಶ’ವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯ ವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ‘ಸಮೀಕ್ಷೆ' ಕೈಗೊಳ್ಳಬೇಕು. ಇದಕ್ಕೆ ಸರಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ, ಅವಕಾಶಗಳಿದ್ದಾಗ ಪರಿಶಿಷ್ಟ ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣವನ್ನು ನಿಗದಿಗೊಳಿಸಬೇಕು. ಭಡ್ತಿ ಮೀಸಲಾತಿಯಲ್ಲಿಯೂ ಒಳಮೀಸಲಾತಿಯನ್ನು ಪರಿಗಣಿಸಬೇಕು. ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿ ಮತ್ತು ಗುತ್ತಿಗೆ ನೌಕರಿಗಳಲ್ಲಿಯೂ ಒಳಮೀಸಲಾತಿ ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ.
ಒಕ್ಕೂಟದ ಪದಾಧಿಕಾರಿಗಳಾದ ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಕರಿಯಪ್ಪ ಗುಡಿಮನೆ, ಶಿವಣ್ಣ ಕನಕಪುರ, ಚಂದ್ರು ತರಹುಣಿಸೆ, ಪ್ರಸನ್ನ ಎ.ಸಿ., ಮಂಜುನಾಥ್ ಸೇರಿದಂತೆ ಹಲವು ಮುಖಂಡರುಗಳು ಇದ್ದರು.