ಬೆಂಗಳೂರಿನಲ್ಲಿ ಮುಂದುವರೆದ ಮಳೆ ಆರ್ಭಟ
ಬೆಂಗಳೂರು: ನಗರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಯಿಂದಾಗಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗುತ್ತಲೇ ಇವೆ. ಮನೆಗಳು, ಕಟ್ಟಡಗಳ ಕುಸಿತ ಸೇರಿದಂತೆ ಬೃಹತ್ ಅಪಾರ್ಟ್‍ಮೆಂಟ್‍ಗಳು, ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಬ್ಬಾಳ ಕ್ಷೇತ್ರದ ಡಾಲರ್ಸ್ ಕಾಲನಿಯ ರೈಲ್ವೆ ಅಂಡರ್‍ಪಾಸ್, ಪ್ರೆಸ್ಟೀಜ್ ಅಪಾರ್ಟ್‍ಮೆಂಟ್, ಸಿ.ಐ.ಎಲ್ ಲೇಔಟ್, ಆರ್.ಟಿ ನಗರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಇಲ್ಲಿನ ಆರ್‍ಜಿಎ ಟೆಕ್ ಪಾರ್ಕ್ ರಸ್ತೆ ಕೆರೆಯಂತಾಗಿದೆ. ಇನ್ನುಳಿದಂತೆ, ಎಂ.ಜಿ ರೋಡ್, ರೇಸ್ ಕೋರ್ಸ್ ಮಲ್ಲೇಶ್ವರಂ ಯಶವಂತಪುರ ಬಾಣಸ್ವಾಡಿ ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವು ಕಡೆ ಮಳೆಯಾಗಿದೆ.
ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರು ದಕ್ಷಿಣ ಸಮೀಪದ ಯಲಚೇನಹಳ್ಳಿಯ ರಾಮಕೃಷ್ಣನಗರ ಮತ್ತು ಫಯಾಜಾಬಾದ್‍ನಲ್ಲಿ ಸುಮಾರು 100 ಮನೆಗಳು ಜಲಾವೃತವಾಗಿವೆ. ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ.