ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮೇಲಿನ ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರ : ಚಂದ್ರಶೇಖರ್
ಆರ್.ಬಿ.ತಿಮ್ಮಾಪುರ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಪುರುಷ ಸಚಿವ ಆರ್.ಬಿ.ತಿಮ್ಮಾಪುರ್ ಎಂದು ಕರ್ನಾಟಕ ರಾಜ್ಯದ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ಮೆಂಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಲಂಚ ಕೊಟ್ಟು ಬಂದಿದ್ದೇವೆ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಇವರು ಲಂಚ ಕೊಟ್ಟು ಬಂದಿರುವ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಬೇಕು. ಸುಳ್ಳು ಹೇಳಿಕೆಗಳನ್ನು ನೀಡಿ ಕರ್ನಾಟಕ ರಾಜ್ಯ ಸನ್ನದುದಾರರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.
ಗುರುಸ್ವಾಮಿಯವರು 2 ವರ್ಷಗಳಿಗೊಮ್ಮೆ ಇದೇ ರೀತಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಧರಣಿ, ಬಂದ್ ಮಾಡುತ್ತೇವೆ ಎಂದು ಭಯದ ವಾತಾವರಣ ಸೃಷ್ಟಿಸಿ ನಂತರ ಅವರೊಂದಿಗೆ ರಾಜೀ ಮಾಡಿಕೊಂಡು ಇವರ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದರು.
ಹಲವು ಅವ್ಯವಹಾರ ನಡೆಸುತ್ತಿರುವ ಗುರುಸ್ವಾಮಿ ಅವರು ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪುರ್ ಅವರ ಖಾತೆಯನ್ನು ಬದಲಾಣೆಗೆ ಒತ್ತಾಯ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನ.20 ರಂದು ನಡೆಸಲು ಉದ್ದೇಶಿಸಿರುವ ಮಧ್ಯ ಮಾರಾಟದ ಬಂದನ್ನು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ಮೆಂಟ್ ಕೋ ಆಪರೇಟಿವ್ ಸೊಸೈಟಿಯು ವಿರೋಧಿಸುತ್ತದೆ ಎಂದು ಹೇಳಿದರು.