ಜಾತಿ ನಿಂದನೆ ಪ್ರಕರಣ | ಆರೋಪಿಗಳಿಗೆ 36 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ
ಚಿಕ್ಕಮಗಳೂರು : ಪರಿಶಿಷ್ಟ ಜಾತಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪಿಗಳಿಗೆ 36 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2021ರ ಮಾ.10ರಂದು ಈ ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಭೀತಾದ ಹಿನ್ನಲೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಸಿ.ಭಾನುಮತಿ ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಚ್.ಎಸ್.ಲೋಹಿತಾಶ್ವಾಚಾರ್ ವಾದ ಮಂಡಿಸಿದ್ದರು.
2021ರ ಮಾ.10ರಂದು ಸಂಜೆ ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿಗೆ ಸೇರಿದ ಚಾಸಾ ಎಂಬವರು ಮತ್ತಾವರ ಗ್ರಾಮದ ಕಲ್ಕೆರೆ ಕರೆಯ ಕಾಲುದಾರಿಯಲ್ಲಿ ನಡೆದು ಸಾಗುತ್ತಿದ್ದಾಗ ಗ್ರಾಮದ ರವಿ ಎಂಬಾತ ಹಳೆ ದ್ವೇಷದಿಂದ ಕ್ಷುಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ಕೂಡ ನಡೆಸಿದ್ದನು. ಇತರ ಆರೋಪಿಗಳಾದ ನವೀನ್ ಗೌಡ, ಎಂ.ಸಿ.ಜೀವನ್ ಕೂಡ, ಚಾಸಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು