ಬೆಂಗಳೂರು | ಕೋವಿಡ್ ಅಕ್ರಮ ಆರೋಪ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ FIR
ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.14: ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಒಳಗೊಂಡಂತೆ ಇತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಕೆಲವು ಜನಪ್ರತಿನಿಧಿಗಳು ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹಾಗೂ ಆರೋಗ್ಯ ಇಲಾಖೆಯ ಹಿಂದಿನ ಅಧಿಕಾರಿಗಳು, ವೈದ್ಯರು ಹಾಗೂ ಗುತ್ತಿಗೆದಾರರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಪತ್ರಾಧಿಕಾರಿ ಎಂ.ವಿಷ್ಣು ಪ್ರಸಾದ್ ನೀಡಿರುವ ದೂರನ್ನು ಆಧರಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಡಾ.ಪಿ.ಗಿರೀಶ್, ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದ ಜಿ.ಪಿ.ರಘು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣೆ ಅಧಿಕಾರಿಯಾಗಿದ್ದ ಎನ್.ಮುನಿರಾಜು, ಲಾಜ್ ಎಕ್ಸ್ಪೋರ್ಟ್ಸ್, ಎಂಎಸ್ ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ಸ್, ಕೆಲವು ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
2020ರಲ್ಲಿ ಕೋವಿಡ್ -19 ಬಿಕ್ಕಟ್ಟಿನ ಉತ್ತುಂಗದಲ್ಲಿ, ವೈದ್ಯಕೀಯ ಶಿಕ್ಷಣ ಇಲಾಖೆಯು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಖರೀದಿಸುವಾಗ ಕಾನೂನು ಖರೀದಿ ಕಾರ್ಯವಿಧಾನಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅದರಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಕೋವಿಡ್ 19ರ ನಿರ್ವಹಣೆಗೆ ಅವಶ್ಯಕವಾಗಿ ಬೇಕಾಗಿದ್ದ ಎನ್-95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಉಪಕರಣಗಳನ್ನು ಸಂಗ್ರಹಿಸಿರುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕಾನೂನಿನ ಎಲ್ಲ ಪ್ರಕ್ರಿಯೆಯನ್ನು ಗಾಳಿಗೆ ತೂರಿ ಕೆಟಿಪಿಪಿ ಕಾನೂನನ್ನು ಉಲ್ಲಂಘಿಸಲಾಗಿದೆ. ಕೋವಿಡ್ ನಿರ್ವಹಣೆಗೆ ನೇಮಿಸಿದ್ದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಅಪರಾಧ ಕೃತ್ಯ ಹಾಗೂ ಷಡ್ಯಂತ್ರ ರೂಪಿಸಿ ದೊಡ್ಡ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಗಳನ್ನು ಖರೀದಿ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಹಲವು ಅಪರಾಧಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದು ಎಫ್ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.