ಸ್ವಯಂ ಪ್ರೇರಿತವಾಗಿ, ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ : ಯೋಗೇಶ್ವರ್
‘ನನ್ನ ರಾಜಕೀಯ ಜೀವನ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆರಂಭಿಸಿದ್ದು’
ಬೆಂಗಳೂರು : ನನ್ನ ರಾಜಕೀಯ ಜೀವನವನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭಿಸಿದ್ದೆ. ಕಾಂಗ್ರೆಸ್ ಪಕ್ಷ ಬಿಟ್ಟಿದ್ದೆ. ಈಗ ಮತ್ತೆ ಬಂದಿದ್ದೇನೆ. ನನ್ನ ಮುಂದಿನ ರಾಜಕೀಯ ಭಾಗ ಕಾಂಗ್ರೆಸ್ ನಲ್ಲಿ ಮುಂದುವರಿಯಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಯಾದ ಬಳಿಕ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೇಸರವಾಗಿದೆ. ಕೆಲವೊಮ್ಮೆ ನಮಗಾಗಿ ನಾವು ಕಟ್ಟಿದ ಮನೆಯಲ್ಲಿ ನಾವೇ ವಾಸ ಮಾಡಲು ಆಗುವುದಿಲ್ಲ. ಅದೇ ಸಂದರ್ಭ ನನಗೆ ಬಂದಿದೆ ಎಂದು ಹೇಳಿದರು.
ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸೇರಿಕೊಂಡ ನಂತರ ಎನ್‍ಡಿಎ ಮೈತ್ರಿಕೂಟದಲ್ಲಿ ಇದ್ದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿರಲಿಲ್ಲ ಎಂದು ಮನಗಂಡು ಸ್ವಯಂಪ್ರೇರಿತವಾಗಿ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಮಾಧ್ಯಮಗಳಲ್ಲಿ ರಾತ್ರಿ 12 ಗಂಟೆಗೆ ನಾವು ಭೇಟಿ ಮಾಡಿದೆವು ಎಂದು ವರದಿಯಾಗಿರುವುದನ್ನು ನೋಡಿದೆ. ನನಗೆ ಅಂತಹ ಅವಶ್ಯಕತೆ ಇಲ್ಲ. ನಾನು ಬೆಳಗ್ಗೆ 8 ಗಂಟೆಗೆ ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗಿ ನನ್ನ ವಿಚಾರ ಚರ್ಚೆ ಮಾಡಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ನಂತರ ಶಿವಕುಮಾರ್ ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿಯೂ ಮಾತನಾಡಿದೆವು. ನಂತರ ಸುರೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಿಸಿದರು. ಅವರ ಆಶೀರ್ವಾದ ಪಡೆದು ನನ್ನ ಮೂಲ ಪಕ್ಷಕ್ಕೆ ಸೇರಿದ್ದೇನೆ. ಇದರಲ್ಲಿ ಬಹಳ ವಿಶೇಷವಿಲ್ಲ ಎಂದು ಯೋಗೇಶ್ವರ್ ಹೇಳಿದರು.
ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಡಿ.ಕೆ.ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಕಳೆದ ಮೂರ್ನಾಲ್ಕು ತಿಂಗಳಲ್ಲಿ ತೆಗೆದುಕೊಂಡಿರುವ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ. ಇದರಲ್ಲಿ ನಾನು ಕೈಬಿಟ್ಟು ಹೋಗುತ್ತಿದ್ದೇನೆ ಎಂದು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಾನು ಪಾಲುದಾರನಾಗಬೇಕು. ಸರಕಾರದ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಈ ತೀರ್ಮಾನ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ನಾನು ಕೆಲಸ ಮಾಡುತ್ತೇನೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷ ಬೆಳೆಸಲು ಶ್ರಮಿಸಿದ ಎಲ್ಲ ಪದಾಧಿಕಾರಿಗಳು ಸೇರಿ ನಾವು ಒಟ್ಟಾಗಿ ಹೋಗೋಣ. ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ದುಡಿಯೋಣ. ಇಷ್ಟು ದಿನ ನಮ್ಮ ನಡುವೆ ಇದ್ದ ಟೀಕೆ ಟಿಪ್ಪಣಿ ಅಭಿವೃದ್ಧಿಗೆ ಪೂರಕವಾಗಿದ್ದವು. ಇನ್ನು ಮುಂದೆ ಜಿಲ್ಲೆಯ ಅಭಿವೃದ್ದಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ನಾನು ಇಂದು ಪಕ್ಷಕ್ಕೆ ಸೇರಿದ್ದು, ಮುಂದೆ ಪಕ್ಷದ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರು ರಾಜಕೀಯದ ಆರಂಭಿಕ ದಿನಗಳಿಂದಲೂ ನಾನು ಅವರ ಜತೆಗಿದ್ದೇನೆ. ಎರಡು ಮೂರು ಬಾರಿ ಸುರೇಶ್ ಗೆಲುವಿನಲ್ಲಿಯೂ ನನ್ನ ಪಾತ್ರವಿದೆ. ಒಂದು ಬಾರಿ ಅವರ ಸೋಲಿನಲ್ಲೂ ನನ್ನ ಪಾತ್ರವಿದೆ. ಮುಂದಿನ ದಿನಗಳಲ್ಲಿ ಸುರೇಶ್ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ ಎಂದು ಯೋಗೇಶ್ವರ್ ತಿಳಿಸಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಹೊಸಬರಲ್ಲ. ನಾನಾ ಕಾರಣಗಳಿಂದ ಪಕ್ಷ ಬಿಟ್ಟಿದ್ದರು. ಈಗ ಮತ್ತೆ ಪಕ್ಷಕ್ಕೆ ಸೇರಿರುವುದು ಚನ್ನಪಟ್ಟಣ ಹಾಗೂ ರಾಮನಗರ ಜಿಲ್ಲೆಯಲ್ಲಿ ಮತ್ತೆ ನಮ್ಮ ಪಕ್ಷಕ್ಕೆ ಶಕ್ತಿ ಬಂದಿದೆ. ನಾನು ರಾಮನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆ ಪ್ರವಾಸ ಮಾಡಿದಾಗ ಅಲ್ಲಿ ಯೋಗೇಶ್ವರ್ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿತ್ತು ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಯೋಗೇಶ್ವರ್ ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಆರಂಭಿಸಿದವರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅವರು ಹೊಸಬರಲ್ಲ. ಇಂದು ಪಕ್ಷಕ್ಕೆ ಅವರು ಸೇರಿರುವುದರಿಂದ ಕೇವಲ ಚನ್ನಪಟ್ಟಣ ಮತ್ತು ರಾಮನಗರ ಜಿಲ್ಲೆಗೆ ಮಾತ್ರವಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಬಹಳ ದಿನಗಳಿಂದ ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಇಂದು ಅವರು ಘರ್ ವಾಪಸಿ (ಮನೆಗೆ ಮರಳಿದ್ದಾರೆ) ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಮಾಜಿ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಶಾಸಕರಾದ ಬಾಲಕೃಷ್ಣ, ದಿನೇಶ್ ಗೂಳಿಗೌಡ, ಪುಟ್ಟಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.