ಪ್ರಜಾತಂತ್ರಕ್ಕೆ ಮಾರಕವಾಗಿರುವ ರಾಜ್ಯಪಾಲರ ಹುದ್ದೆ ರದ್ದುಗೊಳಿಸಿ : ಸಿಪಿಐ
ಬೆಂಗಳೂರು : ರಾಜಕೀಯ ಪ್ರೇರಿತವಾಗಿ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಹುದ್ದೆ ರಾಜಕೀಯವಾಗಿ ದುರ್ಬಳಿಕೆಯಾಗುತ್ತಿದೆ. ಹೀಗಾಗಿ ರಾಜ್ಯಪಾಲರ ಹುದ್ದೆಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷ(ಸಿಪಿಐ) ಆಗ್ರಹಿಸಿದೆ.
ಗುರುವಾರ ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಿಪಿಐ ನೇತೃತ್ವದಲ್ಲಿ, ‘ರಾಜ್ಯಪಾಲ ಹುದ್ದೆ ರದ್ದು ಮಾಡಿ, ಒಕ್ಕೂಟ ವ್ಯವಸ್ಥೆ ಉಳಿಸಿ’ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ‘ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಬಹುಮತ ಪಡೆದು ಆಯ್ಕೆಯಾದ ಚುನಾಯಿತ ಸರಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕುಟಿಲ ರಾಜಕೀಯ ನೀತಿಯಿಂದ ಸಾಬೀತಾಗುತ್ತಿದೆ’ ಎಂದು ದೂರಿದರು.
‘ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವಾಗಲಿ ಇವುಗಳ ಕುರಿತು ನ್ಯಾಯಾಂಗದ ಚೌಕಟ್ಟಿನಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಪಕ್ಷ ಆಗ್ರಹಿಸುತ್ತದೆ. ಆದರೆ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ವೇಳೆ ರಾಜ್ಯಪಾಲರ ಕಚೇರಿಯು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸ್ಪಷ್ಟ’ ಎಂದು ಅವರು ಟೀಕಿಸಿದರು.
ಈ ಹಿಂದೆ ರಾಜ್ಯದ ಹಲವು ಭ್ರಷ್ಟಾಚಾರಗಳ ಕುರಿತಾದ ಪ್ರಕರಣಗಳ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿ ಪ್ರಕರಣಗಳ ತನಿಖೆಗೆ ಅನುಮತಿ ನೀಡುವಂತೆ ಕೋರಿ ವರ್ಷಗಳೇ ಕಳೆದರೂ ಹಿಂದಿನ ಯಾವ ದೂರುಗಳ ಬಗ್ಗೆಯೂ ಕ್ರಮ ಕೈಗೊಳ್ಳದಿರುವ ರಾಜ್ಯಪಾಲರು ಒಬ್ಬ ವ್ಯಕ್ತಿ ನೀಡಿದ ದೂರನ್ನಾಧರಿಸಿ ದೂರು ಸ್ವೀಕರಿಸಿದ ದಿನವೇ ಶೋಕಾಸ್ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಅನುಮತಿ ನೀಡಿರುವುದು ಗಮನಿಸಿದರೆ ರಾಜ್ಯಪಾಲರ ತೀರ್ಮಾನ ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ ಎಂದು ಅವರು ವಿಶ್ಲೇಷಿಸಿದರು.
ಈಗಾಗಲೇ ದೇಶಾದ್ಯಂತ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಪಾಂಡಿಚೆರಿ, ಪಶ್ಚಿಮ ಬಂಗಾಳ, ರಾಜಸ್ಥಾನ ಇತ್ಯಾದಿ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ಬಹಿರಂಗವಾಗಿಯೇ ಸಂಘರ್ಷ ನಡೆದಿರುವುದು ಬಯಲಾಗಿದೆ. ರಾಜ್ಯಪಾಲರು ಬಹುತೇಕ ಸಂದರ್ಭಗಳಲ್ಲಿ ಕೇಂದ್ರದ ಆಳುವ ಪಕ್ಷದ ಪ್ರತಿನಿಧಿಯಂತೆಯೇ ನಡೆದುಕೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರ ಹುದ್ದೆ ಅನಾವಶ್ಯಕವಾಗಿದ್ದು, ಆ ಹುದ್ದೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹೋರಾಟದಲ್ಲಿ ಸಿಪಿಐ ಮುಖಂಡರಾದ ಬಿ. ಅಮ್ಜದ್, ಶಿವರಾಜ್ ಬಿರಾದರ್, ಎಂ.ಸತ್ಯಾನಂದ ಎಂ. ದೀಪಕ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.