ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ | ಸಿ.ಟಿ.ರವಿ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ

ಸಿಟಿ ರವಿ
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಟಿ.ರವಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಫೆ.20ವರೆಗೆ ಮಧ್ಯಂತರ ರಿಲೀಫ್ ನೀಡಿದೆ. ಅಲ್ಲದೆ, ಫಿರ್ಯಾದಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ನೋಟಿಸ್ ಜಾರಿಗೊಳಿಸಿ ಆದೇಶಿದೆ.
ಸಿ.ಟಿ.ರವಿ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ಮಂಡಿಸಿ, ʼಸದನದೊಳಗೆ ಭೀತಿರಹಿತವಾಗಿ ಮಾತನಾಡಲು ಅವಕಾಶವಿದೆ. ಮಾನನಷ್ಟ ಪ್ರಕರಣದ ಭೀತಿಯಿಲ್ಲದೇ ಚರ್ಚೆ ನಡೆಸಬಹುದು. ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಮಾತುಗಳಿದ್ದರೂ ಸಭಾಪತಿ ಕ್ರಮ ಕೈಗೊಳ್ಳಬಹುದುʼ ಎಂದು ವಾದ ಮಂಡಿಸಿದರು.
ಸರಕಾರದ ಪರ ಎಸ್ಪಿಪಿ ಬಿ.ಎ.ಬೆಳ್ಳಿಯಪ್ಪ, ʼಸಿ.ಟಿ.ರವಿ ಧ್ವನಿ ಮಾದರಿ ಪಡೆಯಲು ಅವಕಾಶ ನೀಡಬೇಕು. ಸದನದ ವ್ಯಾಪ್ತಿಯ ಚರ್ಚೆಗೆ ಮಾತ್ರ ಕ್ರಮದಿಂದ ವಿನಾಯಿತಿ ಇದೆ. ಟೇಬಲ್ ಮುರಿದು ದಾಂಧಲೆ, ಅಶ್ಲೀಲ ಪದ ಬಳಕೆಗೆ ವಿನಾಯಿತಿ ಇಲ್ಲʼ ಎಂದು ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿಕೆ ಮಾಡಿದೆ.