ಮಾಜಿ ಸಚಿವೆ ಲಲಿತಾ ನಾಯ್ಕ್ ಹೇಳಿಕೆಗೆ ದಲಿತ ಮುಖಂಡರ ಖಂಡನೆ
‘ದಲಿತ’ ಪದ ಬಳಕೆಗೆ ಆಕ್ಷೇಪ
ಬಿ.ಟಿ.ಲಲಿತಾ ನಾಯ್ಕ್
ಬೆಂಗಳೂರು : ‘ಇಂಗ್ಲಿಷ್ ಮತ್ತು ಕನ್ನಡದ ಯಾವುದೇ ನಿಘಂಟುಗಳಲ್ಲೂ ‘ದಲಿತ ಪದ’ಕ್ಕೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅವರು ಹೇಳಿರುವ ಅರ್ಥ ಇಲ್ಲ. ಹಾಗಿದ್ದರೂ ಏಕೆ ಲಲಿತಾ ನಾಯ್ಕ್ ಅವರು ಹೀಗೆ ಹೇಳಿದ್ದಾರೆಂದು ಅರ್ಥವಾಗುತ್ತಿಲ್ಲ. ಅವರು ಇಲ್ಲ-ಸಲ್ಲದ ವಿವಾದವನ್ನು ಸೃಷ್ಟಿಸಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ತಿಳಿಸಿದೆ.
ಶುಕ್ರವಾರ ಒಕ್ಕೂಟದ ಮುಖಂಡರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ವಿ.ನಾಗರಾಜ್, ಎನ್.ವೆಂಕಟೇಶ್ ಹಾಗೂ ಎನ್.ಮುನಿಸ್ವಾಮಿ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ‘ದಲಿತ’ ಎಂಬ ಪದದ ಕುರಿತು ಬಹಳ ದಿನಗಳಿಂದಲೂ ವಿವಾದ ಸೃಷ್ಟಿಸಿಕೊಂಡು ಬರಲಾಗುತ್ತಿದೆ. ದಲಿತ ಎಂಬ ಪದವನ್ನು ಬಳಸಬಾರದೆಂದು ಬಿಜೆಪಿ ಸರಕಾರ ಈ ಹಿಂದೆ ಆದೇಶ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಲೇಖಕಿ ಬಿ.ಟಿ.ಲಲಿತಾನಾಯ್ಕ್ ಅಸಂಬದ್ಧ ಅರ್ಥವನ್ನು ಅದಕ್ಕೆ ನೀಡಿದ್ದಾರೆ. ದಸಂಸ ಈ ಬೇಜವಾಬ್ದಾರಿ ವ್ಯಾಖ್ಯಾನವನ್ನು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
‘ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ ದಲಿತ ಪದವನ್ನು ಮೊದಲಿಗೆ ಬಳಕೆಗೆ ತಂದವರು ಅಬ್ರಾಹ್ಮಣ ಚಳವಳಿಯ ನೇತಾರರಾದ ಮಹಾತ್ಮಾ ಜ್ಯೋತಿಬಾ ಫುಲೆ. ಅವರು ದಲಿತ ಎಂಬ ಮರಾಠಿ ಪದವನ್ನು ‘ದಮನಿತರು, ತುಳಿತಕ್ಕೊಳಪಟ್ಟವರು, ಛಿದ್ರಗೊಂಡ ಜನರು’ ಎಂಬ ಅರ್ಥದಲ್ಲಿ ಬಳಸಿದ್ದರು. ದಲಿತ ಪದದ ಉತ್ಪತ್ತಿ ಸಂಸ್ಕೃತದ ‘ದಲ’ ಪದವೂ ಆಗಿದೆ ಎಂದು ಹೇಳುತ್ತಾರೆ. ಆದರೆ, ‘ಮಹಾರಾಷ್ಟ್ರದ ದಲಿತ್ ಪ್ಯಾಂಥರ್ಸ್’ ಸಂಘಟನೆಯು ಸಾಮಾಜಿಕ-ಆರ್ಥಿಕ-ರಾಜಕೀಯವಾಗಿ ಹಿಂದುಳಿದ ಎಲ್ಲ ಜಾತಿಯ ಬಡವರನ್ನು ದಲಿತರೆಂದು ವ್ಯಾಖ್ಯಾನಿಸಿತ್ತು.
ಇದೇ ರೀತಿಯಲ್ಲಿ ದಲಿತ ಸಂಘರ್ಷ ಸಮಿತಿಯೂ ‘ದಲಿತರು ಎಂದರೆ ಅಸ್ಪೃಶ್ಯರು ಮತ್ತು ಜಾತಿಯಿಂದ ಅವಮಾನಿತರಾದವರು. ಯಾರು ಹಿಂದೂ ಚಾತುರ್ವರ್ಣ್ಯದ ಶ್ರಮ ವಿಭಜನೆಯ ಕುತಂತ್ರಕ್ಕೆ ಈಡಾಗಿ ಕೀಳುವೃತ್ತಿಗಳನ್ನೇ ತಲೆತಲಾಂತರದಿಂದ ಅವಲಂಬಿಸಿ ಜಾತಿಯ ಹೆಸರು ಹೇಳಿಕೊಳ್ಳಲು ನಾಚಿಕೆ ಪಡುತ್ತಾರೋ ಅವರು’ ಎಂದು ವ್ಯಾಖ್ಯಾನಿಸಿತ್ತು. ಅಲ್ಲದೆ, ಜಾತಿಪದ್ಧತಿ, ಅಸ್ಪೃಶ್ಯತೆಯಂತಹ ಅಸಮಾನತೆಗಳನ್ನು ಸಹಿಸದೆ ಅಸಮಾನ ವ್ಯವಸ್ಥೆಯ ವಿರುದ್ಧ ‘ಸಿಡಿದೆದ್ದ ಜನ’ರೆಂಬ ವ್ಯಾಖ್ಯಾನವೂ ಚಾಲ್ತಿಯಲ್ಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರವರೂ ಇದೇ ವ್ಯಾಖ್ಯಾನದಂತೆಯೇ‘ Depressed classes’ ಎಂದು ಅಸ್ಪೃಶ್ಯ ಸಮಾಜದ ಜನರನ್ನು ಕರೆದಿದ್ದರು. ಮುಂದೆ ದಲಿತ ಪದವನ್ನು ಇದಕ್ಕೆ ಸರಿಸಮಾನವಾಗಿ ಬಳಸಲಾಯಿತು. ಜೊತೆಗೆ ಗಾಂಧೀಜಿಯವರ ಹರಿಜನ ಪದಕ್ಕೆ ವಿರುದ್ಧವಾಗಿ ದಲಿತ ಪದವನ್ನು ಪ್ರತಿರೋಧದ ನೆಲೆಯಲ್ಲಿ ಹೆಚ್ಚು ಪ್ರಚುರಪಡಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.