ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ದರ್ಶನ್ (PC:x/@dasadarshan)
ಹೊಸದಿಲ್ಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಮತ್ತು ಇತರರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಶುಕ್ರವಾರ ತನ್ನ ಮಧ್ಯಂತರ ಆದೇಶದಲ್ಲಿ ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯವು, ಜಾಮೀನು ಪ್ರಶ್ನಿಸಿ ಕರ್ನಾಟಕ ಸರಕಾರವು ಸಲ್ಲಿಸಿರುವ ಮೇಲ್ಮನವಿಯನ್ನು ಪರಿಶೀಲಿಸಲು ಒಪ್ಪಿಕೊಂಡಿದೆ. ಇದೇ ವೇಳೆ ಪ್ರತಿವಾದಿಗಳಿಗೆ ನೋಟಿಸ್ಗಳನ್ನು ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಕರ್ನಾಟಕ ಉಚ್ಚ ನ್ಯಾಯಾಲಯದ ಜಾಮೀನು ಆದೇಶದ ವಿರುದ್ಧ ರಾಜ್ಯದ ಮನವಿಗೆ ಸಂಬಂಧಿಸಿದಂತೆ ದರ್ಶನ್ ಮತ್ತು ಇತರರಿಗೆ ನೋಟಿಸ್ಗಳನ್ನು ಹೊರಡಿಸಿತು. ಇತರ ಸಹ ಆರೋಪಿಗಳು ಉಚ್ಚ ನ್ಯಾಯಾಲಯದ ಆದೇಶದ ಲಾಭವನ್ನು ಪಡೆದುಕೊಳ್ಳಬಹುದು ಎಂದು ರಾಜ್ಯ ಸರಕಾರವು ಆತಂಕ ವ್ಯಕ್ತಪಡಿಸಿದೆ ಎಂದು ಅದು ಹೇಳಿತು.
‘ರಾಜ್ಯ ಸರಕಾರವು ಜಾಮೀನು ರದ್ದತಿಗಾಗಿ ಕೋರಿರುವುದರಿಂದ ಉಚ್ಚ ನ್ಯಾಯಾಲಯದ ಆದೇಶದ ಕಾರ್ಯಾಚರಣೆಯನ್ನು ತಡಯುವುದು ಸೂಕ್ತವಲ್ಲ, ಹಾಗೆ ಮಾಡಿದರೆ ಅದು ಜಾಮೀನು ರದ್ದತಿಗೆ ಸಮವಾಗುತ್ತದೆ. ಆದರೂ ಪ್ರಾಸಿಕ್ಯೂಷನ್ನ ಹಿತಾಸಕ್ತಿಯನ್ನು ರಕ್ಷಿಸಲು, ಯಾವುದೇ ಸಹ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಸಂಬಂಧಿಸಿದ ನ್ಯಾಯಾಲಯವು ನಮ್ಮ ಮುಂದಿರುವ ಉಚ್ಚ ನ್ಯಾಯಾಲಯದ ಆದೇಶವನ್ನು ನೆಚ್ಚಿಕೊಳ್ಳಬಾರದು. ಯಾವುದೇ ಜಾಮೀನು ಅರ್ಜಿಯನ್ನು ಅದರ ಸ್ವಂತ ಅರ್ಹತೆಯ ಮೇಲೆ ನಿರ್ಧರಿಸಬೇಕು’ ಎಂದು ಪೀಠವು ಸ್ಪಷ್ಟಪಡಿಸಿತು.
ರಾಜ್ಯ ಸರಕಾರದ ಪರ ನ್ಯಾಯವಾದಿ ಅನಿಲ ನಿಶಾನಿ ಜೊತೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಿದ್ಧಾರ್ಥ ಲೂಥ್ರಾ ಅವರು, ಉಚ್ಚ ನ್ಯಾಯಾಲಯವು ಇಡೀ ಪ್ರಕರಣವನ್ನು ‘ವೈಟ್ ವಾಷ್’ ಮಾಡಿದೆ ಎಂದು ಹೇಳಿದರು. ಇತರ ಸಹ ಆರೋಪಿಗಳು ಉಚ್ಚ ನ್ಯಾಯಾಲಯದ ಜಾಮೀನು ಆದೇಶದ ಲಾಭ ಪಡೆದುಕೊಳ್ಳಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯವು 2024,ಅ.30ರಂದು ವೈದ್ಯಕೀಯ ಕಾರಣಗಳಿಂದ ದರ್ಶನ್ಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಆದರೆ 2024 ಡಿ.13ರಂದು ಇತರರೊಂದಿಗೆ ದರ್ಶನ್ಗೆ ನಿಯಮಿತ ಜಾಮೀನು ಮಂಜೂರು ಮಾಡಿತ್ತು.