ಶೋಷಿತ ಸಮುದಾಯದ ಏಳಿಗೆ ಸಹಿಸಲಾಗದೆ ಸಿಎಂ ವಿರುದ್ಧ ಷಡ್ಯಂತ್ರ : ದಸಂಸ
ಬೆಂಗಳೂರು : ಶೋಷಿತ ಸಮುದಾಯದಿಂದ ಬಂದ ಸಿದ್ದರಾಮಯ್ಯ ಎರಡನೆ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದನ್ನು ಸಹಿಸಲಾಗದೆ, ಬಿಜೆಪಿ-ಜೆಡಿಎಸ್ ಮುಖಂಡರು ಅಸೂಯೆಯಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಏಳ್ಗೆ ಸಹಿಸಲಾಗದ ಕೋಮುವಾದಿ ಪಕ್ಷಗಳು, ಸಿದ್ದರಾಮಯ್ಯರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಮೂಲಕ ಷಡ್ಯಂತ್ರ ನಡೆಸುತ್ತಿವೆ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ದಸಂಸ ಮತ್ತು ಡಾ.ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ಮಾತನಾಡಿ, ಬಿಜೆಪಿ-ಜೆಡಿಎಸ್‍ನ ಪಾದಯಾತ್ರೆ ದಲಿತ, ಶೋಷಿತರ, ಅಹಿಂದ ಸಮುದಾಯದ ವಿರೋಧಿ ನಡೆಯಾಗಿದೆ ಎಂದು ದೂರಿದರು.
ಕುತಂತ್ರ ರಾಜಕಾರಣ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಮುಂದಿನ ಚುನಾವಣೆಯಲ್ಲಿಯೂ ಅಹಿಂದ ಸಮುದಾಯ ತಿರಸ್ಕರಿಸುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತವೆ ಎಂದು ಶ್ರೀಧರ ಕಲಿವೀರ ಎಚ್ಚರಿಕೆ ನೀಡಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಪಾಲಿದೆ. ಸಿಬಿಐ ಅಧಿಕಾರಿಗಳು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದರೆ ಅವರ ಬಾಯಲ್ಲಿ ಕೇಂದ್ರ ಸಚಿವೆ ಹೆಸರು ಬಂದರೆ ಕಷ್ಟ ಎನ್ನುವ ಕಾರಣಕ್ಕೆ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾದವರ ಪಟ್ಟಿ ಮುಚ್ಚಿಡುತ್ತಿದ್ದಾರೆ. ಬ್ಯಾಂಕಿನ ಅಧಿಕಾರಿಗಳ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ವ್ಯವಸ್ಥಾಪ ನಿರ್ದೇಶಕ ಪದ್ಮನಾಭನ್ ಮತ್ತು ಸಚಿವ ನಾಗೇಂದ್ರ ಅವರನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಎಲ್ಲಿಯೂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಯಾರೂ ಬಹಿರಂಗ ಪಡಿಸಿಲ್ಲ. ಭ್ರಷ್ಟಾಚಾರ ಮಾಡಿದ್ದಾರೆಂಬುದಕ್ಕೆ ಯಾವ ಆಧಾರವೂ ಇಲ್ಲ. ವಿಪಕ್ಷ ನಾಯಕರು, ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಶ್ರೀಧರ ಕಲಿವೀರ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಅಣ್ಣಯ್ಯ, ಎಂ.ಗೋವಿಂದರಾಜ, ಎ.ಗೋಪಾಲ, ಬಸವರಾಜ್ ನೆಲಮಂಗಲ, ಮಂಜುನಾಥ ಅಣ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಕೇಂದ್ರ ಬಜೆಟ್‍ನಲ್ಲಿ ಎಸ್ಸಿಎಸ್‍ಪಿ-ಟಿಎಸ್‍ಪಿ ಕಾಯಿದೆ ಜಾರಿಗೊಳಿಸದೆ, ದಲಿತ ಸಮುದಾಯಕ್ಕೆ 6ಲಕ್ಷ ಕೋಟಿ ರೂ.ಅನುದಾನ ಮಂಜೂರು ಮಾಡದೆ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಲಿತ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ. ಎಸ್ಸಿಎಸ್‍ಪಿ-ಟಿಎಸ್‍ಪಿ ಕಾಯಿದೆ ಜಾರಿ ಮಾಡುವವರೆಗೂ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ’
-ಶ್ರೀಧರ ಕಲಿವೀರ ರಾಜ್ಯಾಧ್ಯಕ್ಷ, ಡಾ.ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ