ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಪ್ರಥಮ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ದೇಶದ ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಲ್ಲದೇ ಐಟಿ-ಬಿಟಿ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕರ್ನಾಟಕ ಅದರಲ್ಲೂ ಬೆಂಗಳೂರು ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ 2024 ರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದಲ್ಲಿ ಯುವಜನತೆಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ನಿಪುಣ’ ಕರ್ನಾಟಕ ಯೋಜನೆಯ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನಿಪುಣ’ ಯೋಜನೆಯಡಿ ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ, ಬಿಎಫ್ ಎಸ್ಐ ಕನ್ಸಾರ್ಷಿಯಂ, ಈ ಐದು ಸಂಸ್ಥೆಗಳ ಜೊತೆ ಒಡಂಬಡಿಕೆಗೆ ಇಂದು ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.
ದಿಲ್ಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಪೇಟೆಂಟ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಪೇಟೆಂಟ್ ಅರ್ಜಿಗಳ ಸಂಖ್ಯೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನದ ಜೊತೆಗೆ ಚಿಪ್ ವಿನ್ಯಾಸದಲ್ಲಿ ದೇಶದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ ಎಂದು ಅವರು ಹೇಳಿದರು.
ಜೈವಿಕ ತಂತ್ರಜ್ಞಾನ ವಲಯಕ್ಕೆ ಶೇ.52 ರಷ್ಟು ಉದ್ಯೋಗಿಗಳ ಪೂರೈಕೆ:
ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಕರ್ನಾಟಕ ಮುಂದಿದ್ದು, ಸುಮಾರು 85 ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಘಟಕಗಳು ನಮ್ಮ ರಾಜ್ಯದಲ್ಲಿವೆ. ಸೆಮಿ ಕಂಡಕ್ಟರ್ ತಯಾರಿಕೆಗೆ ಕರ್ನಾಟಕವೇ ಆಧಾರ. ದೇಶದ ಜೈವಿಕ ತಂತ್ರಜ್ಞಾನ ವಲಯಕ್ಕೆ ಶೇ.52 ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಬೆಳವಣಿಗೆ ನೆಹರು ದೂರದೃಷ್ಠಿಯ ಫಲ:
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ನಮ್ಮ ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಲವಾರು ಶಿಕ್ಷಣ ತಜ್ಞರು ಹೆಸರಾಂತ ಇಂಜಿನಿಯರಿಂಗ್ ಕಾಲೇಜುಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ಬೆಂಗಳೂರು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಬೆಂಗಳೂರು ಬೆಳವಣಿಗೆಗೆ ನೆಹರು ಹಾಗೂ ಅನೇಕರ ದೂರದೃಷ್ಠಿಯ ಕೊಡುಗೆಯಿದೆ ಎಂದು ಅವರು ಹೇಳಿದರು.
ವಿಪ್ರೋ ಸಂಸ್ಥೆಯ ಅಝೀಂ ಪ್ರೇಮ್ ಜೀ ಮತ್ತು ಇನ್ಫೋಸಿಸ್ನ ನಾರಾಯಣಮೂರ್ತಿ ಬೆಂಗಳೂರು ಹೊರತು ಪಡಿಸಿ ಬೇರೆ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಬೆಂಗಳೂರು ಐಟಿ ಹಬ್ ಆಗಿ ಬೆಳೆಯುತ್ತಿರಲಿಲ್ಲ. ಸಾವಿರಾರು ಜನರು ತಮ್ಮ ಸ್ಟಾರ್ಟ್ ಅಪ್ ಗಳಿಗೆ ಬೆಂಗಳೂರನ್ನು ಆಯ್ಕೆ ಮಾಡದೇ ಇದ್ದಿದ್ದರೆ ಬೆಂಗಳೂರು ಲಕ್ಷಾಂತರ ಜನರಿಗೆ ಆಸರೆ ಒದಗಿಸುತ್ತಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಕರ್ನಾಟಕ ದಾರ್ಶನಿಕರ, ತಂತ್ರಜ್ಞರ ಭೂಮಿ:
ಬೆಂಗಳೂರು ಟೆಕ್ ಸಮ್ಮಿಟ್ ನವೋದ್ಯಮಿಗಳ, ಉದ್ಯಮಿಗಳು, ತಂತ್ರಜ್ಞರು, ಸೃಜನಶೀಲರು ಮತ್ತು ಅಸಾಧಾರಣ ಕನಸುಗಾರರ ಸಮ್ಮೇಳನ. ಕರ್ನಾಟಕ ದಾರ್ಶನಿಕರ, ಆಧುನಿಕ ಚಿಂತಕರ ಭೂಮಿ. ಭಾರತದ ಐಟಿ ಕ್ರಾಂತಿಯ ಹಾಗೂ ಜೈವಿಕ ತಂತ್ರಜ್ಞಾನದ ಹುಟ್ಟೂರು. ಮಾಹಿತಿ ತಂತ್ರಜ್ಞಾನದ ಮೂಲಕ ನಮ್ಮ ರಾಜ್ಯದ ಹೆಸರು ಜಾಗತಿಕ ಮಟ್ಟದಲ್ಲಿದೆ ಎಂದು ಅವರು ತಿಳಿಸಿದರು.
ಅನಿಮೇಷನ್ ಕ್ಷೇತ್ರದಲ್ಲಿ 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ:
ಕರ್ನಾಟಕವು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ಆರ್) ವಲಯಗಳಲ್ಲಿ ಅಂತರ್ರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿದೆ. ಈ ವಲಯದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ನಮ್ಮ ಕರ್ನಾಟಕವು 2025 ರ ವೇಳೆಗೆ ಈ ಕ್ಷೇತ್ರದಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಕ್ಷೇತ್ರಕ್ಕೆ ಬೆಂಬಲವಾಗಿ ನಿಂತ ಪರಿಣಾಮ ಸುಮಾರು ಶೇ.70 ರಷ್ಟು ಉದ್ಯೋಗ ಸೃಷ್ಟಿಯಾಗಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿನ ಸಮಸ್ಯೆಗಳನ್ನು ಸರಿಪಡಿಸುವ ತನಕ ವಿರಮಿಸುವುದಿಲ್ಲ:
ರಾಜ್ಯ ರಾಜಧಾನಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಸಮಸ್ಯೆಗಳು ಬೃಹದಾಕಾರವಾಗಿ ಬೆಳಯುವ ಮೊದಲು ನಾವೆಲ್ಲರೂ ಸೇರಿ ಅದನ್ನು ಸರಿಪಡಿಸಬೇಕಾಗಿದೆ. ಬೆಂಗಳೂರು ಉಸ್ತುವಾರಿ ಹೊತ್ತಿರುವ ನಾನು ಈ ಸಮಸ್ಯೆಗಳನ್ನು ಸರಿಪಡಿಸುವ ತನಕ ವಿರಮಿಸುವುದಿಲ್ಲ ಎಂದು ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರು ಅಭಿವೃದ್ಧಿಗೆ ವೇಗ:
ನಾವು ಅಧಿಕಾರಕ್ಕೆ ಬಂದ ಕಡಿಮೆ ಅವಧಿಯಲ್ಲಿಯೇ ಬೆಂಗಳೂರಿನ ಅಭಿವೃದ್ದಿಗೆ ಅನೇಕ ಬೃಹತ್ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಸುರಂಗ ರಸ್ತೆ ಯೋಜನೆ ಹಾಗೂ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಯೋಜನೆಯಿಂದ ನಗರದ ಸಂಚಾರ ದಟ್ಟಣೆಗೆ ಪರಿಹಾರ ದೊರೆಯಲಿದೆ. ಸುರಂಗ ರಸ್ತೆ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಆದಷ್ಟು ಬೇಗ ಈ ಕನಸನ್ನು ನನಸು ಮಾಡಲಾಗುವುದು ಎಂದು ಅವರು ತಿಳಿಸಿದರು.
ಹಲವಾರು ಯೋಜನೆಗಳ ಮೂಲಕ ಬೆಂಗಳೂರನ್ನು ಭವಿಷ್ಯದಲ್ಲಿ ವ್ಯಾಪಾರಿ, ನಾಗರಿಕ ಸ್ನೇಹಿ, ವಾಸಿಸಲು ಯೋಗ್ಯವಾದ ನಗರವನ್ನಾಗಿ ಮಾಡಲು ನಮ್ಮ ಸರಕಾರ ಬದ್ದವಾಗಿದೆ. ಬೆಂಗಳೂರು ಟೆಕ್ ಸಮ್ಮಿಟ್ ವಿಶ್ವದ ಅತ್ಯಂತ ಮಹತ್ವದ ಟೆಕ್ ಸಮ್ಮಿಟ್ ಗಳಲ್ಲಿ ಒಂದು. ಸರಕಾರ, ಐಟಿ ಉದ್ಯಮ, ಅಧಿಕಾರಿಗಳು, ರಾಜಕೀಯ ಮುಖಂಡರು ಈ ಕಾರ್ಯಕ್ರಮ ಇಷ್ಟು ದೊಟ್ಟ ಮಟ್ಟಕ್ಕೆ ಬೆಳೆಯಲು ಶ್ರಮಪಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.