ಕೈಗಾರಿಕೋದ್ಯಮಕ್ಕೆ ಕರ್ನಾಟಕ ಸರಕಾರ ಹೆಚ್ಚಿನ ಅವಕಾಶ ನೀಡಲಿದೆ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : “ಕರ್ನಾಟಕ ಸುಸ್ಥಿರ ಆಡಳಿತ, ಜಲಸಂಪನ್ಮೂಲ, ಮಾನವ ಸಂಪನ್ಮೂಲ, ಇಂಧನ, ತಂತ್ರಜ್ಞಾನ ಸೇರಿದಂತೆ ಕೈಗಾರಿಕೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯವನ್ನು ಹೊಂದಿದ್ದು, ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಿ ನೀವು ನಮಗೆ ಶಕ್ತಿ ತುಂಬಿದರೆ, ನಾವು ಕೂಡ ನಿಮಗೆ ಅಗತ್ಯ ಬಲ ನೀಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಇಲ್ಲಿನ ಜಿಕೆವಿಕೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಭಾರತೀಯ ಲೋಹಗಳ ಸಂಸ್ಥೆ (IIM) ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ, ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
“ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿದೆ. ಭೂ ವಿಸ್ತೀರ್ಣದಲ್ಲಿ 3ನೇ ಅತಿ ದೊಡ್ಡ ರಾಜ್ಯವಾಗಿದೆ. ಐಟಿ-ಬಿಟಿ ಮಾತ್ರವಲ್ಲದೇ ನೀವೆಲ್ಲರೂ ನಿಮ್ಮ ಇತರೇ ಕ್ಷೇತ್ರಗಳಲ್ಲಿಯೂ ನಮಗೆ ಮಾರ್ಗದರ್ಶನ ನೀಡಬೇಕು. ನಮ್ಮ ರಾಜ್ಯದಲ್ಲಿ ಕೈಗಾರಿಕೆಗೆ ಅನೇಕ ಅವಕಾಶಗಳನ್ನು ಒದಗಿಸಿಕೊಡಲಾಗಿದೆ. ರಾಜ್ಯದಲ್ಲಿ ಸುಸ್ಥಿರ ಆಡಳಿತ ಹಾಗೂ ಜಲಸಂಪನ್ಮೂಲ ಹೊಂದಿದ್ದೇವೆ. ಇಂಧನ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಿದ್ದು, ಮತ್ತಷ್ಟು ಪ್ರಗತಿ ಸಾಧಿಸಲು ಅವಕಾಶವಿದೆ. ಸಿದ್ದರಾಮಯ್ಯ ಅವರ ಕಳೆದ ಅವಧಿಯ ಸರಕಾರದಲ್ಲಿ 18 ಸಾವಿರ ಮೆ.ವ್ಯಾಟ್ ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಲಾಗಿದೆ” ಎಂದು ತಿಳಿಸಿದರು.
“ಈ ಅವಧಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಬೃಹತ್ ಕೈಗಾರಿಕಾ ಕ್ಷೇತ್ರವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡಲು ಬದ್ಧವಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ, ಪ್ರತಿಭಾವಂತ ಮಾನವ ಸಂಪನ್ಮೂಲಗಳನ್ನು ತಯಾರು ಮಾಡುತ್ತಿರುವ ರಾಜ್ಯವಾಗಿದೆ. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿದ್ದು, ಅತಿ ಹೆಚ್ಚು ವೈದ್ಯರು ಹೊರ ಬರುತ್ತಿದ್ದಾರೆ. ಅನೇಕ ಮ್ಯಾನೇಜ್ ಮೆಂಟ್ ಕಾಲೇಜುಗಳಿವೆ” ಎಂದು ವಿವರಿಸಿದರು.
“ಸಜ್ಜನ್ ಜಿಂದಾಲ್ ಅವರು ಎಂ.ಎಸ್.ರಾಮಯ್ಯ ಕಾಲೇಜಿನಲ್ಲೇ ಓದಿದ್ದು, ಅವರಿಗೆ ಬೆಂಗಳೂರಿನ ಬೀದಿ ಬೀದಿಗಳ ಪರಿಚಯವಿದೆ. ಅವರು ಬೆಂಗಳೂರಿನಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಅನೇಕ ಸಿಎಸ್ಆರ್ ಯೋಜನೆ ಹಮ್ಮಿಕೊಂಡಿದ್ದಾರೆ” ಎಂದರು.
Inaugurated IIM-ATM 2024 at GKVK, Bengaluru, alongside Chief Minister Sh. @Siddaramaiah , welcoming the attendees for participation in the forum and exploring opportunities of Iron and Steel manufacturing in Karnataka.
— DK Shivakumar (@DKShivakumar) November 20, 2024
As has been our commitment always, Karnataka govt shall… pic.twitter.com/ZNgAp8CpVJ
“ಈ ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಿರುವುದನ್ನು ನೋಡಿ ನನಗೆ ಸಂತೋಷವಾಯಿತು. 25 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅವರನ್ನು ಭೇಟಿ ಮಾಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ ಮಾಡಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಆಹ್ವಾನ ನೀಡಿದ್ದೆ. ಆದರೆ ಬೇರೆ ವಿಚಾರಗಳಿಂದ ಅವರು ಇದನ್ನು ನಿರಾಕರಿಸಿದ್ದರು" ಎಂದರು.
“ನಮ್ಮ ಸರಕಾರ ಸದಾ ನಿಮ್ಮ ಬೆಂಬಲಕ್ಕೆ ಇದೆ. ನಾವೆಲ್ಲರೂ ಒಟ್ಟಾಗಿ ಈ ರಾಜ್ಯದ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕೋಣ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ನಿಮಗೆ ನೆರವಾಗಲು ನಾವು ಬದ್ಧರಾಗಿದ್ದೇವೆ. ನೀವು ನಿಮ್ಮ ಮನಸ್ಸು ಬಿಚ್ಚಿ ಈ ವೇದಿಕೆ ಮೂಲಕ ನಿಮ್ಮ ವಿಚಾರವನ್ನು ಚರ್ಚೆ ಮಾಡಿ. ನೀವು ನಮ್ಮ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದಷ್ಟು ನಾವು ನಿಮಗೆ ಎಲ್ಲಾ ರೀತಿ ಶಕ್ತಿ ತುಂಬಲು ಮುಂದಾಗುತ್ತೇವೆ” ಎಂದು ತಿಳಿಸಿದರು.