ಮುಸ್ಲಿಂ ಮಹಿಳೆಯರ ಕುರಿತು ಮಾನಹಾನಿಕರ ಹೇಳಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ
ಬೆಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿರುವಂತಹ ಮಾನಹಾನಿಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯು ಮಹಿಳೆಯ ಅತ್ಯಾಚಾರಕ್ಕಿಂತಲೂ ವಿಕೃತವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ಸದಾ ಕೋಮು ದ್ವೇಷವನ್ನು ಹರಡುತ್ತಾ ನಾಡಿನ ಸೌಹಾರ್ದಕ್ಕೆ ಧಕ್ಕೆ ತಂದ ಅನೇಕ ಉದಾಹರಣೆಗಳಿದ್ದರೂ, ಅವೆಲ್ಲವನ್ನೂ ಮೀರಿಸಿದಂತೆ ಪ್ರಭಾಕರ್ ಭಟ್ಟರ ಹೇಳಿಕೆ ಅವರ ಮನಸ್ಸಿನೊಳಗೆ ಅಡಗಿರುವಂತಹ ನೀಚತನವನ್ನು ಎತ್ತಿ ತೋರಿಸಿತು ಎಂದು ಹೇಳಿದ್ದಾರೆ.
"ಯತ್ರ ನಾರೆಸ್ತು ಪೂಜೆಂತೆ, ತತ್ರ ರಮಂತೆ ದೇವತಾಃ." ಎಂದು ಸದಾ ಸಂಸ್ಕೃತ ಶ್ಲೋಕಗಳಿಂದ ಮಹಿಳೆಯರನ್ನು ಹೊಗಳುವ ಇವರಿಗೆ, ಆ ಶ್ಲೋಕದಲ್ಲಿ ಎಲ್ಲೂ ಹಿಂದೂ ನಾರಿಯರು ಎಂದು ಹೇಳಿಲ್ಲ ಎನ್ನುವುದನ್ನು ಮೊದಲು ಆರೆಸ್ಸೆಸ್ ನವರು ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಅದು ಸದಾ ಮಹಿಳೆಯರನ್ನೆ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಅವರ ದುರಭ್ಯಾಸ ಎಂದು ದೂರಿದರು.
"ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯು ಮಹಿಳೆಯರ ಅತ್ಯಾಚಾರಕ್ಕಿಂತಲೂ ವಿಕೃತವಾದದ್ದು. ಒಬ್ಬ ಮಹಿಳೆಯನ್ನು ದೈಹಿಕವಾಗಿ ಅತ್ಯಾಚಾರ ಮಾಡಿದರಷ್ಟೇ ಅತ್ಯಾಚಾರವಲ್ಲ. ಆಕೆಯನ್ನು ಈ ರೀತಿ ಬಹಿರಂಗವಾಗಿ ನಿಂದಿಸುವುದು ಕೂಡ ಅತ್ಯಾಚಾರಕ್ಕಿಂತ ಘನಘೋರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ 140 ಕೋಟಿ ಜನಸಂಖ್ಯೆಯಲ್ಲಿ 20 ಕೋಟಿ 80 ಲಕ್ಷ ಜನಸಂಖ್ಯೆ ಇರುವ ಮುಸ್ಲಿಮರ ಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ತೆಗೆದುಕೊಂಡರೂ, ಕನಿಷ್ಠ 10 ಕೋಟಿ ಮುಸ್ಲಿಂ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತ ಹೇಳಿಕೆಯನ್ನು ಒಬ್ಬ ಮಹಿಳೆಯಾಗಿ ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಮಹಿಳೆ ಯಾವುದೇ ಧರ್ಮಕ್ಕೆ ಸೇರಿದವಳೇ ಆಗಿರಲಿ, ಆಕೆ ಯಾವುದೇ ಜಾತಿಗೆ ಸೇರಿದ ಮಹಿಳೆಯಾಗಿರಲಿ, ದೇಶದಲ್ಲಿ ಶತಮಾನಗಳಿಂದ ಶೋಷಣೆ ಅನುಭವಿಸುತ್ತಾ ಬಂದಿರುವುದು ಶೋಚನೀಯ. ಮಹಿಳೆಯನ್ನು ಇಂದು ಆಕೆಯ ಉಡುಗೆ- ತೊಡಗೆಗಳ ಮೂಲಕ ಮತ್ತು ಆಕೆಯ ವೈಯಕ್ತಿಕ ಬದುಕಿನಲ್ಲೂ ಕೂಡ ಹಸ್ತಕ್ಷೇಪ ಮಾಡುವುದರೊಂದಿಗೆ ನಾಗರಿಕ ಸಮಾಜದ ಎದುರು ಆಕೆಯನ್ನು ವಿವಸ್ತ್ರ ಗೊಳಿಸುವುದು ಘನಘೋರ ಅಪರಾಧ ಎಂದಿದ್ದಾರೆ.
ಸಂವಿಧಾನಯುತ ಅಧಿಕಾರವಾದ ಸಮಾನತೆ ಮಹಿಳೆಯರಿಗಿದ್ದರೂ, ಆಕೆ ನಿರಂತರ ಶೋಷಿತಳು. ಚಂದ್ರ ಲೋಕದ ಮೇಲೆ ಕಾಲಿಟ್ಟಾ ಕ್ಷಣ ನಾವು ಎಲ್ಲವೂ ಸಾಧಿಸಿದಂತಲ್ಲ. ನಮ್ಮ ನಡುವೆ ಇರುವ ಮನುಷ್ಯರ ಜೊತೆ ನಾವು ಬದುಕುವ ರೀತಿ ನಮ್ಮ ನಾಗರಿಕತೆಯನ್ನು ಸಾರಿ ಹೇಳುತ್ತದೆ. ಪ್ರಭಾಕರ್ ಭಟ್ ಒಬ್ಬ ಅನಾಗರಿಕ ಮೃಗ ಈತನ ಮೇಲೆ ಸರ್ಕಾರ ಸುಮೋಟೋ ಕೇಸ್ ಮಾಡಿಕೊಳ್ಳುವುದರ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ಕೊಡುವವರಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.