ದೋಷಪೂರಿತ ಟ್ಯಾಬ್ ವಿತರಣೆ, ಹಣ ರೀಫಂಡ್ಗೆ ವಿಳಂಬ: ಅಮೆಝಾನ್ ಕಂಪೆನಿಗೆ ದಂಡ
Photo: PTI
ಬೆಂಗಳೂರು: ಗ್ರಾಹಕನಿಗೆ ಡೆಲಿವರಿ ನೀಡಿದ್ದ ದೋಷಪೂರಿತ ಟ್ಯಾಬ್ ವಾಪಸ್ ಪಡೆದು ಹಣವನ್ನು ವಾಪಸ್ ನೀಡದ ಅಮೆಝಾನ್ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗ್ರಾಹಕನಿಗೆ ಬಡ್ಡಿ ಸಮೇತ ಟ್ಯಾಬ್ ಮೊತ್ತವನ್ನು ಮರಳಿಸುವಂತೆ ದಂಡ ವಿಧಿಸಿ ಆದೇಶ ನೀಡಿದೆ.
ಖರೀದಿದಾರರು ಮತ್ತು ವಸ್ತು ಮಾರಾಟ ಮಾಡುವವರಿಗೆ ನಾವು ಆನ್ಲೈನ್ ಪ್ಲಾಟ್ಫಾರಂ ಮಾತ್ರ ಒದಗಿಸಿದ್ದೇವೆ ಎಂಬ ಅಮೆಝಾನ್ ವಾದವನ್ನು ತಿರಸ್ಕರಿಸಿರುವ ವೇದಿಕೆ, ರೀಫಂಡ್ ಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಗ್ರಾಹಕನಿಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳಲು ಸೂಚಿಸಿದೆ.
ಪ್ರಕಾಶ್ ಎನ್ನುವ ಗ್ರಾಹಕರು ಅಮೆಝಾನ್ನಿಂದ 19,990 ಮೌಲ್ಯದ ನವೀಕೃತ ಟ್ಯಾಬನ್ನು ಇಎಂಐ ಮೂಲಕ ಖರೀದಿಸಿದ್ದರು. ಆದರೆ, ಡೆಲಿವರಿ ನೀಡಿದ ಟ್ಯಾಬ್ ಜೊತೆಗೆ ಬೇರೆ ಕಂಪೆನಿಯ ಚಾರ್ಜರ್ ಇತ್ತು. ತಪ್ಪು ಆರ್ಡರ್ ಡೆಲಿವರಿ ವಿಚಾರವನ್ನು ಅಮೆಝಾನ್ಗೆ ತಿಳಿಸಿದ ಪ್ರಕಾಶ್, ಕೂಡಲೇ ಟ್ಯಾಬ್ ಹಾಗೂ ಚಾರ್ಜರ್ ಅನ್ನು ವಾಪಸ್ ಮರಳಿಸಿದ್ದರು.
ಪೂರ್ತಿ ಹಣವನ್ನು ರೀಫಂಡ್ ಮಾಡುವುದಾಗಿ ಮೇಲ್ ಮೂಲಕ ತಿಳಿಸಲಾಗಿತ್ತು. ಆದರೆ, ತಿಂಗಳು ಕಳೆದರೂ ಹಣ ಮರಳಿಸದೆ ನೆಪವನ್ನು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ್, ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.