‘ಕೋವಿಡ್ ಹಗರಣ’ ಬಿಜೆಪಿ ನಾಯಕರ ಬಂಧನಕ್ಕೆ ಆಗ್ರಹ
‘ಬೆಂಗಳೂರು : ಕೊರೋನ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ನ್ಯಾ.ಮೈಕೆಲ್ ಡಿ.ಕುನ್ಹಾ ವರದಿಯಲ್ಲಿ ತಿಳಿಸಲಾಗಿದೆ. ರಾಜ್ಯ ಸರಕಾರ ಈ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಕೂಡಲೇ ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.
ಬುಧವಾರ ನಗರದ ಆಪ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ತನಿಖೆ ಮಾಡಲು ರಚಿಸಿದ್ದ ಕುನ್ಹಾ ನೇತೃತ್ವದ ಆಯೋಗವು ಮಧ್ಯಂತರ ವರದಿ ನೀಡಿದ್ದು, 187.8ಕೋಟಿ ರೂ.ಅಕ್ರಮ ನಡೆದಿದೆ ಎಂದು ಹೇಳಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಡಾ.ಸುಧಾಕರ್, ಡಾ.ಅಶ್ವಥನಾರಾಯಣ ಹಾಗೂ ಶ್ರೀರಾಮುಲು ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯಮೂರ್ತಿ ನೀಡಿರುವ ವರದಿಗೆ ಸರಕಾರ ಅವಮಾನ ಮಾಡಬಾರದು. ಕೋವಿಡ್ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸರಕಾರಕ್ಕೆ ಅಪಾರ ನಷ್ಟ ಉಂಟಾಗಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ಹೊಂದಾಣಿಕೆ ರಾಜಕಾರಣ ಮಾಡದೆ ಮತ್ತು ಒತ್ತಡಕ್ಕೆ ಮಣಿಯದೆ ಹಗರಣದಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ತೆಗದುಕೊಳ್ಳಬೇಕು ಎಂದು ನಂಜಪ್ಪ ಕಾಳೇಗೌಡ ತಿಳಿಸಿದ್ದಾರೆ.
ವಿಪಕ್ಷ ನಾಯಕರ ಮೇಲೆ ಸುಳ್ಳು ಆರೋಪ ಕೇಳಿ ಬಂದ ಕೂಡಲೆ, ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ, ಸಿಬಿಐ ಅಧಿಕಾರಿಗಳು ಈಗ ಏನು ಮಾಡುತ್ತಿದ್ದಾರೆ? ಬಿಜೆಪಿ ಸರಕಾರದ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ಆಯೋಗವು ವರದಿ ನೀಡಿರುವುದು ಪ್ರಧಾನಿ ನರೇಂದ್ರ ಮೋದಿಯ ಗಮನಕ್ಕೆ ಬಂದಿಲ್ಲವೇ? ಪ್ರಕರಣದಲ್ಲಿ ಈಡಿ, ಸಿಬಿಐ ಮಧ್ಯಪ್ರವೇಶಿಸಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಜೀವ ಕಾಪಾಡಿಕೊಳ್ಳಲು ಜನ ಒದ್ದಾಡುತ್ತಿದ್ದರೆ, ಬಿಜೆಪಿ ಸರಕಾರ ಹೆಣಗಳ ಮೇಲೆ ಹಣ ಮಾಡಿಕೊಳ್ಳುತ್ತಿತ್ತು. ಸ್ಮೆಕ್ಸ್ ಕಂಪೆನಿಯಿಂದ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರಕಾರ 1.80 ಲಕ್ಷ ರೂ.ಗೆ ಖರೀದಿ ಮಾಡಿದರೆ, ಕರ್ನಾಟಕದ ಬಿಜೆಪಿ ಸರಕಾರ 2.96 ಲಕ್ಷ ರೂ.ಗೆ ಖರೀದಿ ಮಾಡಿತ್ತು. 1,195 ಉಪಕರಣಗಳ ಖರೀದಿಗೆ 19.85ಕೋಟಿ ರೂ. ಹೆಚ್ಚುವರಿ ಹಣ ಖರ್ಚು ಮಾಡಿ ಸರಕಾರಕ್ಕೆ ನಷ್ಟ ಮಾಡಿದೆ ಎಂದು ಅವರು ದೂರಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೊರೊನಾ ಚಿಕಿತ್ಸೆ ನೀಡಲು ಸಾಕಷ್ಟು ಬೆಡ್ಗಳು ಖಾಲಿ ಇದ್ದರೂ ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ಸಾಯುವ ಪರಿಸ್ಥಿತಿಗೆ ದೂಡಿದ್ದರು. ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಜನರ ಜೀವದ ಜೊತೆ ಆಟವಾಡಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆನಾದರು ಜವಾಬ್ದಾರಿ ಇದ್ದರೆ ಕೂಡಲೇ ಭ್ರಷ್ಟಾಚಾರ ಮಾಡಿದವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನಂಜಪ್ಪ ಕಾಳೇಗೌಡ ಆಗ್ರಹಿಸಿದರು.