ಹಿಜಾಬ್ ನಿಷೇಧ ಆದೇಶ ಹಿಂಪಡೆಯುವಂತೆ ಎಪಿಸಿಆರ್ ಆಗ್ರಹ
ಬೆಂಗಳೂರು: ಸಂವಿಧಾನಿಕ ಮೂಲಭೂತ ಹಕ್ಕಾದ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಆದೇಶಿಸಿ ಶಿಕ್ಷಣ ಇಲಾಖೆಯ ಮುಖಾಂತರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಬೇಕು ಎಂದು ಬಹುತ್ವ ಕರ್ನಾಟಕ ಹಾಗೂ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಕರ್ನಾಟಕ ಚಾಪ್ಟರ್ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಗಳು, ಈ ಮೂಲಕ ರಾಜ್ಯದ ಹೆಣ್ಣು ಮಕ್ಕಳು ಭಯಮುಕ್ತವಾಗಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕಾಗಿದೆ. ಈಗಾಗಲೇ ಹಲವಾರು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಮುಂದುವರಿಸದೆ ಅರ್ಧದಲ್ಲೆ ಮೊಟಕುಗೊಳಿಸುವ ವಾತಾವರಣವನ್ನು ಈ ಹಿಂದಿನ ಸರಕಾರ ಮಾಡಿತ್ತು. ಆದ್ದರಿಂದ ಅವರಿಗೆ ಶಿಕ್ಷಣದ ಪುನರ್ವಸತಿ ಕಲ್ಪಿಸಬೇಕು ಎಂದು ಕೋರಿವೆ.
ಸುತ್ತೋಲೆ ಹೊರಬರುತ್ತಲೇ ಸರ್ವೋಚ್ಚ ನ್ಯಾಯಲಯದಲ್ಲಿರುವ ಮೇಲ್ಮನವಿ ಅರ್ಜಿಯನ್ನು ಹಿಂಪಡೆದು. ಆ ಮೂಲಕ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳು ಜಾರಿಗೆ ಬರುವಂತೆ ಮಾಡಬೇಕಾಗಿ ರಾಜ್ಯ ಸರಕಾರದ ಬಳಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಎಪಿಸಿಆರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಿಯಾಝ್ ತಿಳಿಸಿದ್ದಾರೆ.