ಜೆಡಿಎಸ್ ಕೇಂದ್ರ ಕಚೇರಿ ʼಜೆಪಿ ಭವನʼದ ಹೆಸರನ್ನು ಬದಲಾಯಿಸಲು ಒತ್ತಾಯ
Photo:X@nammahdk
ಬೆಂಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ತನ್ನ ನಿಲುವು, ತತ್ವ, ಸಿದ್ಧಾಂತದಿಂದ ಹೊರಗೆ ಬಂದಿದೆ. ಹೀಗಾಗಿ ನಗರದಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿಯ ಕಟ್ಟಡಕ್ಕೆ ಇಟ್ಟಿರುವ ಜೆಪಿ ಭವನ ಹೆಸರನ್ನು ಬದಲಾಯಿಸಬೇಕೆಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ರವಿವಾರ ಪ್ರಕಟನೆ ಹೊರಡಿಸಿರುವ ವೇದಿಕೆಯ ಮುಖಂಡ ಎಚ್.ಎಂ.ವೆಂಕಟೇಶ್, ಜನಮಾನಸದಲ್ಲಿ ಜೆಪಿ ಎಂದೇ ಖ್ಯಾತರಾಗಿದ್ದ ಜಯಪ್ರಕಾಶ್ ನಾರಾಯಣ್ರ ತತ್ವ-ಸಿದ್ಧಾಂತವನ್ನು ಇತ್ತೀಚಿನ ದಿನಗಳ ವರೆಗೂ ಮೈಗೂಡಿಸಿಕೊಂಡು ಬಂದಿರುವ ಜೆಡಿಎಸ್ ಇತ್ತೀಚಿನ ದಿನಗಳಲ್ಲಿ ಅವರ ತತ್ವ-ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೆಪಿ ತತ್ವ-ಸಿದ್ಧಾಂತದ ಅಡಿಯಲ್ಲಿ ಸ್ಥಾಪಿತವಾದ ಜನತಾ ಪಕ್ಷ ಇಬ್ಭಾಗವಾದಾಗ ಎಚ್.ಡಿ.ದೇವೇಗೌಡ ಜನತಾದಳ ಜಾತ್ಯತೀತ ಪಕ್ಷವನ್ನು ಸ್ಥಾಪಿಸಿ ನಂತರದ ದಿನಗಳಲ್ಲಿ ತಾವು ದೇಶದ ಮಣ್ಣಿನ ಮಗ ಎಂದೇ ಖ್ಯಾತಿ ಪಡೆದರು. ಜಯಪ್ರಕಾಶ್ ನಾರಾಯಣ್ ಮಾರ್ಗದರ್ಶನದಲ್ಲಿಯೇ ರಾಜಕೀಯ ಜೀವನವನ್ನು ಉತ್ತುಂಗಕ್ಕೆ ಏರಿದರು.
ಆದರೆ, ಈಗ ಎಚ್.ಡಿ.ದೇವೇಗೌಡರು ಜಾತ್ಯತೀತ ನಿಲುವಿನ ತತ್ವ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು, ಜೆಪಿಯವರ ತತ್ವ ಸಿದ್ಧಾಂತಕ್ಕೆ ತಣ್ಣೀರು ಎರಚಿ ಕೋಮುವಾದಕ್ಕೆ ಹೆಸರುವಾಸಿಯಾದ ಬಿಜೆಪಿಯೊಂದಿಗೆ ಶಾಮಿಲಾಗಿದ್ದಾರೆ. ಇದು ಜೆಪಿ ಅನುಯಾಯಿಗಳು ಮತ್ತು ಅಭಿಮಾನಿಗಳ ಮನಸ್ಸಿಗೆ ಧಕ್ಕೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ ಜಾತ್ಯತೀತ ಜನತಾದಳದ ಕಟ್ಟಡದ ಮೇಲಿರುವ ಜೆಪಿ ಭವನ ಎಂಬ ಹೆಸರನ್ನು ಬದಲಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ಮುಖಂಡ ಎಚ್.ಎಂ. ವೆಂಕಟೇಶ್ ಆಗ್ರಹಿಸಿದ್ದಾರೆ.