ಕನ್ನಡ ಸಂಸ್ಕೃತಿ ಇಲಾಖೆ ಗುತ್ತಿಗೆ ಸಂಸ್ಕೃತಿ ಬಿಡಲಿ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ಸರಕಾರದ ಹಲವು ಇಲಾಖೆಗಳಲ್ಲಿ ಬಹುತೇಕ ನೌಕರರು ಗುತ್ತಿಗೆ, ಹೊರಗುತ್ತಿಗೆ ಮತ್ತು ಸಂಚಿತ ವೇತನ ಪಡೆಯುವವರು ಇದ್ದಾರೆ. ಸರಕಾರ ಈ ನಡೆಯನ್ನು ನಿಲ್ಲಿಸಬೇಕು. ಕೊನೆ ಪಕ್ಷದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಾದರೂ ಗುತ್ತಿಗೆ ಸಂಸ್ಕೃತಿಯನ್ನು ಬಿಡಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
ಗುರುವಾರ ನಗರದ ನಯನ ಸಭಾಂಗಣದಲ್ಲಿ ನಡೆದ ‘ಲೇಖಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸಂಭ್ರಮ’ದಲ್ಲಿ ಮಾತನಾಡಿದ ಅವರು, ಒಟ್ಟು 400 ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇರುವುದು ಎರಳೆಣಿಕೆಯಷ್ಟು ಮಾತ್ರ. 14 ಸಾವಿರ ಕ್ಕಿಂತ ಅಧಿಕ ಅಥಿತಿ ಉಪನ್ಯಾಸಕರಿದ್ದಾರೆ. ಕೇಂದ್ರದಲ್ಲಿ 30ಲಕ್ಷ ರಾಜ್ಯದಲ್ಲಿ 2ಲಕ್ಷ ಉದ್ಯೋಗಗಳು ಖಾಲಿ ಇವೆ. ಆದರೆ ಎಲ್ಲ ಕಡೆ ಗುತ್ತಿಗೆ ನೌರರನ್ನು ನೇಮಿಸಿಕೊಳ್ಳಲಾಗುತ್ತಿದೆ. ನಾವೆಲ್ಲರು ಸೇರಿ ಕನ್ನಡ ಸಂಸ್ಕೃತಿ ಇಲಾಖೆಯನ್ನು ಗುತ್ತಿಗೆ ಸಂಸ್ಕೃತಿಯಿಂದ ಬಿಡುಗಡೆ ಮಾಡುವತ್ತ ಕೆಲಸ ಮಾಡೋಣ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಭಿನಂದನೆ ಕಾರ್ಯಕ್ರಮಗಳ ಮೌಲ್ಯ ಕುಸಿದಿದೆ. ಒಬ್ಬರಿಗೆ ಒಳ್ಳೆಯದಾಗುತ್ತಿದ್ದರೆ ಸಂಭ್ರಮಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅತೃಪ್ತಿ ಹೆಚ್ಚಾಗಿರುವುದರಿಂದ ಸಾಂಸ್ಕೃತಿಕ ಸ್ನೇಹ ಎಷ್ಟರ ಮಟ್ಟಿಗೆ ಉಳಿದಿದೆ ಎಂದು ಪ್ರಶ್ನಿಸಿಕೊಳ್ಳಬೇಕು. ಹರೀಶ್ ಅವರು ಶ್ರಮಿಕ ಲೋಕದಿಂದ ಸಾಂಸ್ಕೃತಿಕ ಲೋಕಕ್ಕೆ ಬಂದಿರುವುದು ಸಂತೋಷದ ಸಂಗತಿಯಾಗಿದೆ.
ಇದೇ ವೇಳೆ ಅವಿರತ ಹರೀಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಸಾಹಿತಿ ಡಾ.ರಾಜಶೇಖರ್ ಮಠಪತಿ, ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಟಿ.ಎಸ್.ದಕ್ಷಿಣಾಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ, ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಕರಿಯಪ್ಪ.ಎನ್ ಮತ್ತಿತರರು ಉಪಸ್ಥಿತರಿದ್ದರು.