ನ್ಯೂಯಾರ್ಕ್ನ ‘ದ ಎಡ್ಜ್’ ಸ್ಕೈಡೆಕ್ ವೀಕ್ಷಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ನ್ಯೂಯಾರ್ಕ್ : ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈಡೆಕ್ ನಿರ್ಮಾಣ ಮಾಡುವ ಕನಸು ಕಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನಲ್ಲಿರುವ ‘ದ ಎಡ್ಜ್’ ಸ್ಕೈಡೆಕ್ಗೆ ಭೇಟಿ ಮಾಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲನೆ ನಡೆಸಿದರು.
ರವಿವಾರ ತಮ್ಮ ಧರ್ಮಪತ್ನಿ ಉಷಾ ಅವರ ಜತೆ ಸ್ಕೈಡೆಕ್ ವೀಕ್ಷಿಸಿದ ಶಿವಕುಮಾರ್, ‘ದ ಎಡ್ಜ್’ ಸ್ಕೈಡೆಕ್ನ ಮನೋಹರ ನೋಟವನ್ನು ಕಣ್ತುಂಬಿಕೊಂಡರು. ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್ ನಲ್ಲಿರುವ ಕಟ್ಟಡದ 100ನೆ ಮಹಡಿಯಲ್ಲಿ 7500 ಚದರಡಿಯ ಈ ಡೆಕ್ ಅನ್ನು ವೀಕ್ಷಣೆ ನಡೆಸಿದರು.
ಈ ಡೆಕ್ ಫ್ಲೋರ್ ನಿಂದ ಹಿಡಿದು ಸೀಲಿಂಗ್ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ. ಬೆಂಗಳೂರಿನ ಸ್ಕೈಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್, ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ.ಬಾಬು ಕೀಲಾರ ಅವರೊಂದಿಗೆ ಚರ್ಚಿಸಿದರು.
ಈ ಪ್ರವಾಸದಲ್ಲಿ ಶಿವಕುಮಾರ್ ಅವರು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ನಡೆಸಿದರು. ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಎಚ್ಓಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜತೆ ಶಿವಕುಮಾರ್ ಸಮಾಲೋಚನೆ ನಡೆಸಿದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್ಗೆ ಹೊಸ ವ್ಯಾಖ್ಯಾನ ನೀಡುವುದರ ಜೊತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ’ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.