ಬೆಂಗಳೂರು ಪ್ರದಕ್ಷಿಣೆ ಹಾಕಿ ಸ್ವಚ್ಛತೆ ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು!
ಬೆಂಗಳೂರು: ರಸ್ತೆಗಳಲ್ಲಿ ಕಸ ವಿಲೇವಾರಿ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಮತ್ತು ನ್ಯಾ.ಫಣೀಂದ್ರ ಅವರು ಸೋಮವಾರ ನಗರಾದ್ಯಂತ ಪ್ರದಕ್ಷಿಣೆ ಹಾಕಿ ಪರಿಶೀಲನೆ ನಡೆಸಿದ್ದಾರೆ.
ಬನಶಂಕರಿ 2ನೇ ಹಂತದ ಸಬ್‍ರಿಜಿಸ್ಟರ್ ಕಚೇರಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಬದಿ ಇಷ್ಟು ಕಸವಿದ್ದರೂ ಏಕೆ ತೆರವುಗೊಳಿಸಿಲ್ಲ. ಯಾರು ಸರಿಯಾಗಿ ಕಸ ಸಾಗಿಸುವುದಿಲ್ಲವೋ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ದಂಡ ಹಾಕುವಂತೆ ದಕ್ಷಿಣ ವಲಯದ ಡಿಜಿಎಂ ಭೀಮೇಶ್ ಅವರಿಗೆ ಸೂಚಿಸಿದರು.
ಇನ್ನು ನಗರ ಪ್ರದಕ್ಷಿಣೆ ವೇಳೆ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿರುವುದನ್ನು ಕಂಡು ಸಂಚಾರಿ ಪೊಲೀಸರಿಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ತರಾಟೆ ತೆಗೆದುಕೊಂಡಿದ್ದು, ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ವಾಹನ ನಿಲ್ಲಿಸುವುದೇಕೆ, ಈ ಬಗ್ಗೆ ಪೊಲೀಸರು ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ರಸ್ತೆ ಬದಿ ಪ್ರಾಣಿಗಳ ತ್ಯಾಜ್ಯ ಬಿಸಾಡಿರುವುದನ್ನು ಕಂಡು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ನ್ಯಾ.ಫಣೀಂದ್ರ ಅವರು ಬಿಎಸ್‍ಡಬ್ಲ್ಯುಎಂಎಲ್ ಎಜಿಎ ಶಿಲ್ಪಾ ಅವರಿಗೆ ತರಾಟೆಗೆ ತೆಗೆದುಕೊಂಡರು. ರಸ್ತೆ ಬದಿ ಪ್ರಾಣಿಗಳ ತ್ಯಾಜ್ಯ ತೆರವುಗೊಳಿಸಿ. ತ್ಯಾಜ್ಯ ಬಿಸಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರದ ಕದರೇನಹಳ್ಳಿ ವ್ಯಾಪ್ತಿಯಲ್ಲಿ ಕಸ ಹಾಗೆಯೇ ಇರುವ ಬಗ್ಗೆ ಮಾಹಿತಿ ಬಂದಿತ್ತು. ಯಾರು ಇಲ್ಲಿಗೆ ಬಂದು ನೋಡಿಲ್ಲ. ಅದನ್ನು ಪರಿಶೀಲಿಸಿ ಒಂದು ದಿನ ಕಾಲಾವಕಾಶ ನೀಡಿದ್ದೇವೆ, ಅಧಿಕಾರಿಗಳು ಕಾಲಮಿತಿಯಲ್ಲಿ ಸರಿಪಡಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮುಂದೊಂದು ದಿನ ಸಿಲಿಕಾನ್ ಸಿಟಿ ಗಾರ್ಬೇಜ್ ಸಿಟಿ ಗ್ಯಾರಂಟಿ : ನ್ಯಾ.ಬಿ.ವೀರಪ್ಪ
ನಗರಾದ್ಯಂತ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಬೆಂಗಳೂರಿನ ಸ್ಥಿತಿಗತಿ ನೋಡಿದರೆ ನಮಗೆ ನೋವಾಗುತ್ತದೆ. ಒಂದು ಕಡೆ ಕಸ ಇದೆ, ಮತ್ತೊಂದು ಕಡೆ ಪ್ರಾಣಿಗಳ ತ್ಯಾಜ್ಯ ಬಿದ್ದಿವೆ. ಅಧಿಕಾರಿಗಳು ಆರಾಮಾಗಿ ಬರುತ್ತಾರೆ ಸಂಬಳ ತೆಗೆದುಕೊಳ್ಳುತ್ತಾರೆ. ಕಂಪೆನಿಗೆ ಕೊಟ್ಟಿದ್ದೇವೆ ಅಂತ ಎಸ್ಕೇಪ್ ಆಗುತ್ತಿದ್ದಾರೆ.
ಬಿಬಿಎಂಪಿಯವರು ಬದಲಾವಣೆ ಆಗಬೇಕು. ವಸೂಲಿ ಆಫೀಸರ್‌ಗಳು ಬಿಬಿಎಂಪಿಗೆ ಬರಬೇಡಿ. ಡೆಂಗ್ಯೂ ಸೇರಿದಂತೆ ಅನೇಕ ರೋಗಗಳು ಬರುತ್ತಿವೆ. ಜನ ಕೂಡ ಸರಿಯಾಗಬೇಕು. ಬಿಬಿಎಂಪಿ ವಾಹನಗಳಿಗೆ ಕಸ ಹಾಕಬೇಕು. ಟ್ರಾಫಿಕ್ ಇನ್‍ಸ್ಪೆಕ್ಟರ್ ಗಳು ಎಚ್ಚೆತ್ತುಕೊಳ್ಳಬೇಕು. ಬೆಂಗಳೂರಿಗೆ ಗಾರ್ಡನ್ ಸಿಟಿ ಅಂತ ಹೆಸರಿತ್ತು. ಈಗ ಅದು ಗಾರ್ಬೇಜ್ ಸಿಟಿ ಆಗುತ್ತಿದೆಯೇ ಎನ್ನುವ ಅವಮಾನ ಮೂಡುತ್ತಿದೆ. ಇದೆಲ್ಲಾ ಅವಸ್ಥೆ ಸರಿಪಡಿಸದಿದ್ದರೆ ಮುಂದೊಂದು ದಿನ ಗಾರ್ಬೇಜ್ ಸಿಟಿ ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.