100 ಕೋಟಿ ರೂ. ಆಮಿಷ ಆರೋಪ | ದೇವರಾಜೇಗೌಡ ʼಮೆಂಟಲ್ ಗಿರಾಕಿʼ, ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ : ಡಿಕೆಶಿ
ಬೆಂಗಳೂರು : ‘ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‍ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಬಳಿ ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಆತ ಮಾನಸಿಕ ಸಮಸ್ಯೆ ಎದುರಿಸುತ್ತಿರಬೇಕು. ಆತ ಮೆಂಟಲ್ ಗಿರಾಕಿ, ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ದೇವರಾಜೇಗೌಡ ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನಿಮ್ಮ(ಮಾಧ್ಯಮ)ಬಗ್ಗೆ ಅನುಕಂಪವಿದೆ. ಮಾಧ್ಯಮದವರು ವಿದ್ಯಾವಂತರು, ಪ್ರಜ್ಞಾವಂತರಿದ್ದೀರಿ. ಯಾರೋ ಏನೋ ಹೇಳುತ್ತಾರೆಂದು ಇಂತಹ ವಿಚಾರ ಹಾಕಿಕೊಂಡು ಕೂತರೆ, ನಿಮ್ಮ ಘನತೆ ಏನಾಗಬೇಕು. ಅವನ ಹೇಳಿಕೆಯಲ್ಲಿ ಸತ್ಯ ಇದೆಯೇ, ಇಲ್ಲವೆ ಎಂದು ಪರಿಶೀಲಿಸಬೇಕಲ್ಲವೇ?’ ಎಂದು ಪ್ರಶ್ನಿಸಿದರು.
‘ಯಾರಾದರೂ ಆರೋಪ ಮಾಡುವಾಗ ಆಧಾರ ಇರಬೇಕಲ್ಲವೇ? ಮಾನಸಿಕ ಆಸ್ಪತ್ರೆ ಸೇರಬೇಕಾದವರ ಮಾತಿಗೆ ಇಷ್ಟು ಪ್ರಾಮುಖ್ಯತೆ ನೀಡುವುದು ಸರಿಯಲ್ಲ’ ಎಂದು ಆಕ್ಷೇಪಿಸಿದ ಶಿವಕುಮಾರ್, ‘ನಾನು ಆ ವ್ಯಕ್ತಿ ಜತೆ ವಿಶೇಷವಾಗಿ ಮಾತನಾಡಿಲ್ಲ. ನಾನು ಡಿಸಿಎಂ ಆಗಿದ್ದು ನೂರಾರು ಜನ ಬಂದು ನಮ್ಮನ್ನು ಸಂಪರ್ಕಿಸುತ್ತಾರೆ. ಒಳ್ಳೆಯವರು, ಕೆಟ್ಟವರು ಎಲ್ಲರೂ ಬರುತ್ತಾರೆ. ನನ್ನ ಬಳಿ ಬಂದು ಮಾತನಾಡುತ್ತೇನೆ ಎನ್ನುವವರನ್ನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದು ವಿವರಣೆ ನೀಡಿದರು.
‘ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಜನ್ಮದಿನ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಸಿಗಲಿ. ಅವರ ದುಃಖ ದೂರವಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ತುಂಬು ಹೃದಯದಿಂದ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ’ ಎಂದು ಶಿವಕುಮಾರ್ ತಿಳಿಸಿದರು.
ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ: ‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್‍ಡ್ರೈವ್ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು ಸಂತ್ರಸ್ತೆಯರ ಬಗ್ಗೆ, ಅವರಿಗಾಗಿರುವ ಅನ್ಯಾಯದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಎಸ್‍ಐಟಿ ಸಮರ್ಥವಾಗಿ ತನಿಖೆ ನಡೆಸಿ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ನನಗಿದೆ. ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಕರ್ತವ್ಯ’ ಎಂದು ಅವರು ತಿಳಿಸಿದರು.