ಘನತ್ಯಾಜ್ಯ ವಾಹನ ಚಾಲಕರು, ಲೋಡರ್ಸ್ಗಳ ಖಾಯಂ ನೇಮಕಕ್ಕೆ ಒತ್ತಾಯಿಸಿ ಧರಣಿ
ಬೆಂಗಳೂರು : ಬಿಬಿಎಂಪಿಯಲ್ಲಿ ಸುಮಾರು 20 ರಿಂದ 25 ವರ್ಷಗಳಿಗೂ ಮೇಲ್ಪಟ್ಟ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ದಿನಗೂಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆ ಮತ್ತು ಘನತ್ಯಾಜ್ಯ ಸಾಗಿಸುವ ವಾಹನ ಚಾಲಕರು, ಸಹಾಯಕರು, ಲೋಡರ್ಸ್ಗಳನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ, ನಗರದ ಫೀಡಂ ಪಾರ್ಕ್ನಲ್ಲಿ ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ವತಿಯಿಂದ ಧರಣಿ ನಡೆಸಲಾಯಿತು.
ಘನತ್ಯಾಜ್ಯ ನಿರ್ವಹಣೆಯಲ್ಲಿ ಘನತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರು, ಸಹಾಯಕರು, ಲೋಡರ್ಗಳನ್ನು ಐ.ಪಿ.ಡಿ ಸಾಲಪ್ಪ ವರದಿಯಂತೆ ಪೌರಕಾರ್ಮಿಕರೆಂದು ಘೋಷಿಸಿ ತಕ್ಷಣವೇ ಒಂದು ವರ್ಷಕ್ಕೂ ಅಧಿಕವಾಗಿ ಸ್ವಚ್ಚತೆ ಕಾರ್ಯಗಳಲ್ಲಿ ತೊಡಗಿರುವವರನ್ನು ಖಾಯಂಗೊಳಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
2023ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮತ್ತು ರಾಹುಲ್ ಗಾಂಧಿಯವರು ನೀಡಿದ ಭರವಸೆಯಂತೆ ಚಾಲಕರು, ಸಹಾಯಕರು, ಲೋಡರ್ಸ್ಗಳನ್ನು ಖಾಯಂಗೊಳಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿರಿಗೆ ನೇಮಕಾತಿಯ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿ, ಶೀಘ್ರವೇ ಆದೇಶ ಪತ್ರಗಳನ್ನು ನೀಡಬೇಕು. 55 ವರ್ಷ ತುಂಬಿದ ಪೌರಕಾರ್ಮಿಕರಿಗೆ ಐ.ಪಿ.ಡಿ. ಸಾಲಪ್ಪರವರ ವರದಿಯಂತೆ ಅನುಭವದ ಆಧಾರದ ಮೇಲೆ ಖಾಯಂ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ಐ.ಪಿ.ಡಿ. ಸಾಲಪ್ಪ ಅವರ ವರದಿಯಂತೆ 500ಜನ ಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ 32 ಸಾವಿರ ಜನ ಪೌರಕಾರ್ಮಿಕರು ಕಾರ್ಯ ನಿರ್ವಹಿಸಲು ನೇರ ಪಾವತಿ ಅಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಪಡೆಯಲು ಆದೇಶ ಹೊರಡಿಸಬೇಕು. ಹೊರ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ (ಎಸ್ಡಬ್ಲ್ಯೂಐ) ಘನತ್ಯಾಜ್ಯ ಪರಿವೀಕ್ಷಕರನ್ನು ನೇರ ವೇತನಕ್ಕೆ ಪಡೆಯಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ತ್ಯಾಜ್ಯ ಮತ್ತು ಒಣತ್ಯಾಜ್ಯ ಸಂಗ್ರಹಣ ಕೇಂದ್ರವನ್ನು ಪೌರಕಾರ್ಮಿಕರು, ಚಾಲಕರು, ಸಹಾಯಕರು, ಲೋಡರ್ಗಳು ಹಾಗೂ ಸ್ಕ್ಯಾವೆಂಜರ್ಗಳ ಅವಲಂಭಿತರಿಗೆ ಗುತ್ತಿಗೆ ನೀಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.