ಪಿ.ಲಂಕೇಶ್ರ ಟೀಕೆ-ಟಿಪ್ಪಣಿಗಳನ್ನು ಡಿಜಿಟಲೀಕರಣಗೊಳಿಸಿ : ದಿನೇಶ್ ಅಮೀನ್ ಮಟ್ಟು
ಬೆಂಗಳೂರು : ಹಿರಿಯ ಪತ್ರಕರ್ತ ಪಿ.ಲಂಕೇಶ್ ಅವರು 20 ವರ್ಷಗಳ ಕಾಲ ಪ್ರತಿ ವಾರ ಟೀಕೆ ಟಿಪ್ಪಣಿಗಳನ್ನು ಬರೆದಿದ್ದಾರೆ. ಕನಿಷ್ಟ 12,00 ಟೀಕೆ ಟಿಪ್ಪಣಿಗಳಿವೆ. ಅವೆಲ್ಲವನ್ನೂ ಸರಕಾರ, ಮಾಧ್ಯಮ ಅಕಾಡಮಿ ಅಥವಾ ಸಾಹಿತ್ಯ ಅಕಾಡಮಿ ಸಂಗ್ರಹಿಸಿ ಅವುಗಳನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಕಲಾಗ್ರಾಮದಲ್ಲಿ ಸಾಹಿತ್ಯ ಅಕಾಡಮಿಯ ವತಿಯಿಂದ ಆಯೋಜಸಿರುವ ಲಂಕೇಶ್ ಬಹುತ್ವಗಳ ಶೋಧ ಅಧ್ಯಯನ ಶಿಬಿರದಲ್ಲಿ ಮಾತನಾಡಿದ ಅವರು, ಈಗ 3 ಸಂಪುಟಗಳಲ್ಲಿ ಪಿ.ಲಂಕೇಶ್ರ ಟೀಕೆ ಟಿಪ್ಪಣಿಗಳು ಪ್ರಕಟಗೊಂಡಿವೆ. ಆದರೆ ಇನ್ನುಳಿದ ಎಲ್ಲ ಟೀಕೆ ಟಿಪ್ಪಣಿಗಳು ಪ್ರಮುಖವಾಗಿವೆ. ಅವುಗಳನ್ನು ಸಂಗ್ರಹಿಸಬೇಕಿದೆ ಎಂದು ತಿಳಿಸಿದರು.
ಇಂದು ರಾಜ್ಯದಲ್ಲಿ ಜಾತಿಗಣತಿ ವರದಿಯ ಕುರಿತು ಚರ್ಚೆ ನಡೆಯುತ್ತಿದೆ. ಅದನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧಿಸುತ್ತಿವೆ. ಇಂಥ ಸಂದರ್ಭದಲ್ಲಿ ಪ್ರಾಮಾಣಿಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳುವ ಮಾಧ್ಯಮವಾಗಲಿ, ಸರಕಾರವಾಗಲಿ ಇಲ್ಲವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಲಂಕೇಶ್ ಇದ್ದಿದ್ದರೆ ಏನು ಪ್ರತಿಕ್ರಿಯೆ ನೀಡುತ್ತಿದ್ದರು ಎನ್ನುವುದು ಪ್ರಶ್ನೆಯಾಗಿದೆ ಎಂದು ಹೇಳಿದರು.
1983ರಲ್ಲಿ ಕಾಂಗ್ರೆಸ್ ಸೋತು ಜನತಾ ರಂಗ ಅಧಿಕಾರಕ್ಕೆ ಬಂದಾಗ ಚಳವಳಿಗಳ ಯಶಸ್ಸು ಎಂದು ತಿಳಿಯಲಾಗಿತ್ತು. ಆದರೆ ಆಗ 18 ಮಂದಿ ಬಿಜೆಪಿ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಅದರಲ್ಲಿ 8 ಮಂದಿ ದಕ್ಷಿಣ ಕನ್ನಡದವರು. ಅದ್ದರಿಂದ ಇವತ್ತು ಚರ್ಚೆ ಮಾಡುತ್ತಿರುವ ಕೋಮುವಾದದ ಬೀಜ 1983ರಲ್ಲೇ ಬಿತ್ತಲಾಗಿತ್ತು ಎಂದು ಅಭಿಪ್ರಾಯಪಟ್ಟರು.
1983ರಲ್ಲಿ ಲಂಕೇಶ್ ಅವರು ಟೀಕೆ ಟಿಪ್ಪಣಿಯಲ್ಲಿ, ಭಾರತೀಯತ್ವದ ಬಗ್ಗೆ ಸ್ಪಷ್ಟ ನಿಲುವು ತಾಳದಿದ್ದರೆ, ಅನೇಕ ದುರಂತಗಳ ಗಂಗೋತ್ರಿಗಳಾಗಬೇಕಾಗುತ್ತದೆ. ಹಿಂದೂಧರ್ಮದ ಘೋರಿಯನ್ನು ನಾವೇ ತೋಡಿದ ಅಪರಾಧಿಗಳಾಗಬೇಕಾಗುತ್ತದೆ ಎಂದು ಬರೆದಿದ್ದರು. 1983ರ ನಂತರದ ಟೀಕೆ ಟಿಪ್ಪಣಿಗಳನ್ನು ನೋಡಿದರೆ ಈ ರೀತಿಯ ವಿಚಾರ ಹೆಚ್ಚಿರುವುದನ್ನು ನೋಡಬಹುದು ಎಂದು ಅವರು ತಿಳಿಸಿದರು.
ಯಾವುದೇ ಒಂದು ಪತ್ರಿಕೆ ಯಶಸ್ಸು ಕಾಣಬೇಕಾದರೆ ಓದುಗರಿಂದ ಪ್ರತಿಕ್ರಿಯೆ ಬರಬೇಕು. ಆಗ ಪ್ರಾಮಾಣಿಕ ಓದುಗರು ಮತ್ತು ಪ್ರಾಮಾಣಿಕ ಬರಹಗಾರರು ಇದ್ದರು. ಲಂಕೇಶ್‍ರ ತರಗತಿಗೆ ಹೋಗದವರು ಲಂಕೇಶ್ ಅವರನ್ನು ಮೇಷ್ಟ್ರು ಎಂದು ಕರೆಯುತ್ತಾರೆ. ಅವರಿಗೆ ಅವರ ವಿದ್ಯಾರ್ಥಿಗಳ ಭವಿಷ್ಯದ ಬಗೆಗಿನ ಕಾಳಜಿಯಿಂದ ಬರೆಯುತ್ತಿದ್ದರು ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ಈ ಸಂದರ್ಭದಲ್ಲಿ ವಿಮರ್ಶಕಿ ಎಂ.ಎಸ್.ಆಶಾದೇವಿ, ಚಲನಚಿತ್ರ ನಿರ್ದೇಶಕ ಕೃಷ್ಣ ಮಾಸಡಿ, ನಿವೃತ್ತ ಅಧಿಕಾರಿ ಎನ್.ಆರ್.ವಿಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
‘ಲಂಕೇಶ್ ಅವರು ತಮ್ಮ ನಾಟಕಗಳಲ್ಲಿ ಮಧ್ಯಮ ವರ್ಗದ ಪೀಕಲಾಟ ಮತ್ತು ವಾಸ್ತವತೆಯನ್ನು ಕುರಿತು ಬರೆದಿದ್ದಾರೆ. ಕ್ರಾಂತಿ ಬಂತು ಕ್ರಾಂತಿ ನಾಟಕದಿಂದ, ಗಿಳಿಯು ಪಂಜರದೊಳಿಲ್ಲ’ ನಾಟಕದಲ್ಲಿ ಮಧ್ಯಮ ವರ್ಗದ ಜೀವನದ ಬಗ್ಗೆ ತಿಳಿಸಿದ್ದಾರೆ. ಲಂಕೇಶ್ ಬದುಕಿನಲ್ಲಿ ಎಲ್ಲಕ್ಕಿಂತ ಘೋರವಾದದ್ದು, ಬೇಸರ ಎಂದು ಹೇಳಿದ್ದರು. ಭಾರತ ಎಲ್ಲ ಮೂಲಗಳಿಂದ ಆಕ್ರಮಣಕ್ಕೆ ಒಳಗಾಗಿದೆ. ರೋಗಗ್ರಸ್ತ ಸಮಾಜದ ಬಗ್ಗೆ ಗುಣಮುಖ ನಾಟಕದಲ್ಲಿ ತಿಳಿಸಿದ್ದಾರೆ. ಈಡಿಪಸ್ ನಾಟಕ ಕನ್ನಡಕ್ಕೆ ಅನುವಾದ ಮಾಡಿದ್ದರೂ ಅದು ಮೂಲ ಕೃತಿಯ ಹಾಗೆ ಇದೆ’
-ಸಿ.ಬಸವಲಿಂಗಯ್ಯ, ಹಿರಿಯ ನಾಟಕಕಾರ