ಮುಡಾ ಪ್ರಕರಣ | ನ್ಯಾಯಾಂಗ ತನಿಖೆಯಲ್ಲಿ ಬಿಜೆಪಿಯ ಭ್ರಷ್ಟಾಚಾರ ಬಯಲಾಗಲಿದೆ : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ಮುಡಾ ಹಗರಣ ಎಂಬ ಸತ್ತ ಹಾವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಡಿದು ಎಚ್ಚರಿಸಲು ವಿಫಲ ಯತ್ನ ನಡೆಸುತ್ತಿದ್ದಾರೆ. ಮುಡಾದಲ್ಲಿ ನಡೆದಿರುವ ಅಕ್ರಮಗಳೆಲ್ಲಾ ಬಿಜೆಪಿಯ ಕಾಲಾವಧಿಯಲ್ಲೇ ಆದಂತವು. ಈಗ ಈ ಅಕ್ರಮಗಳೆಲ್ಲಾ ನ್ಯಾಯಾಂಗ ತನಿಖೆಗೊಳಪಟ್ಟಿವೆ. ನ್ಯಾಯಾಂಗ ತನಿಖೆಯಲ್ಲಿ ಬಿಜೆಪಿಯ ಭ್ರಷ್ಟಾಚಾರ ಬಯಲಾಗುವುದು ಖಡಾಖಂಡಿತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಈ ಭಯದಿಂದಲೇ ಬಿಜೆಪಿಯವರು ಅಧಿವೇಶನ ಸುಗಮವಾಗಿ ನಡೆಯಲು ಅಡ್ಡಿ ಪಡಿಸಿದ್ದರು. ಈಗ ಪಾದಯಾತ್ರೆ ನಡೆಸಲು ಹೊರಟಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಮುಡಾ ಅಕ್ರಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನವರೂ ಇದ್ದಾರೆ ಎಂದು ಸ್ವತಃ ಬಿಜೆಪಿಯವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಜ್ಯ ಬಿಜೆಪಿಯವರ ಪಾದಯಾತ್ರೆಯನ್ನು ಯತ್ನಾಳ್ ಒಂದು ನಾಟಕ ಎಂದು ಟೀಕಿಸಿದ್ದಾರೆ. ಹೀಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾವ ಮುಖ ಇಟ್ಟುಕೊಂಡು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಪಾದಯಾತ್ರೆ ಮಾಡಲು ಕೊಂಚವಾದರೂ ನೈತಿಕತೆ ಇರಬೇಕಲ್ಲವೇ.? ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.