ಮೈದಾನದ ಗೇಟ್ ಬಿದ್ದು ಮಗು ಸಾವು ಪ್ರಕರಣ | ಗುತ್ತಿಗೆದಾರ, ಅಧಿಕಾರಿಗಳ ಮೇಲೆ ಕ್ರಮ : ದಿನೇಶ್ ಗುಂಡೂರಾವ್
ಬೆಂಗಳೂರು : ಮಲ್ಲೇಶ್ವರಂ ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು 11 ವರ್ಷದ ಬಾಲಕ ನಿರಂಜನ್ ಸಾವಿಗಿಡಾದ ಪ್ರಕರಣ ಕುರಿತು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೊಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಟುಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ರೂ. ಹಾಗೂ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಅಲ್ಲದೇ ಬಾಲಕನ ಸಹೋದರಿಯ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಆರ್. ಗುಂಡೂರಾವ್ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದರು.
ಈ ಬಗ್ಗೆ ಅಗತ್ಯ ತನಿಖೆ ನಡೆಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. 4 ವರ್ಷದ ಹಿಂದೆ ಮೈದಾನಕ್ಕೆ ಗೇಟ್ ಅಳವಡಿಸಲಾಗಿದೆ. ಸಂಬಂಧಪಟ್ಟವರಿಂದ ವರದಿ ತರಿಸಿಕೊಳ್ಳುತ್ತೇವೆ. ಗೇಟ್ ಕಾಮಗಾರಿ ಕಳಪೆ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ ಈ ಕುರಿತು ಯಾರಿಂದಲೂ ದೂರು ಬಂದಿರಲಿಲ್ಲ ಎಂದು ಹೇಳಿದರು.
ಕಾಮಗಾರಿ ಕುರಿತು ಯಾರಿಂದ ಲೋಪ ಆಗಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮಲ್ಲೇಶ್ವರಂನ ಆಟದ ಮೈದಾನದ ಗೇಟ್ ಬಿದ್ದು ಬಾಲಕ ಮೃತಪಟ್ಟಿದ್ದು, ಘಟನೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿಯ ಲೋಪಗಳನ್ನು ತನಿಖೆ ನಡೆಸಲು ಇಂಜಿನಿಯರ್‍ಗಳ ಸಮಿತಿಯನ್ನು ರಚಿಸಲಾಗಿದೆ. ಒಂದು ವಾರದೊಳಗೆ ವರದಿ ಪಡೆದು ಕ್ರಮ ಜರುಗಿಸಲಾಗುವುದು’
-ತುಷಾರ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ