‘ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ’ಯಡಿ 82 ಆಸ್ಪತ್ರೆಗಳೊಂದಿಗೆ ಸಂಪರ್ಕ : ದಿನೇಶ್ ಗುಂಡೂರಾವ್
ಬೆಂಗಳೂರು: ‘ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ’ ಯೋಜನೆಯಡಿ ನಗರದಲ್ಲಿ 82 ಆಸ್ಪತ್ರೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು, ಹೃದಯದಲ್ಲಿನ ಸಮಸ್ಯೆಗಳ ಚಿಕಿತ್ಸೆಗೆ ಬರುವ ಜನರಿಗೆ ಇಸಿಜಿ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಹೆಲ್ತ್ ಆಂಡ್ ವೆಲ್ನೆಸ್ ನಾಲೆಡ್ಜ್ ಎಂಟಪ್ರ್ರೈಸ್ ಹಾಗೂ ಹ್ಯಾಪಿಯೆಸ್ಟ್ ಹೆಲ್ತ್ ವತಿಯಿಂದ ‘ಹಾರ್ಟ್ ಟು ಹಾರ್ಟ್-2024’ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಬಳಕೆಯಿಂದ ಹೃದ್ರೋಗದ ಕುರಿತು ಮಾಹಿತಿಯನ್ನು ಮುಂಚಿತವಾಗಿ ತಡೆಗಟ್ಟುವ ಮತ್ತು ಪತ್ತೆಹಚ್ಚುವ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಹ್ಯಾಪಿಯೆಸ್ಟ್ ಹೆಲ್ತ್-ನಾಲೆಡ್ಜ್ ಅಂಡ್ ಡಯಾಗ್ನೋಸ್ಟಿಕ್ಸ್ ನ ಅನಿಂಧ್ಯಾ ಚೌಧರಿ ಮಾತನಾಡಿ, ‘ಹಾರ್ಟ್ -ಟು- ಹಾರ್ಟ್ ಸಭೆಯು ಜನರಿಗೆ ಸರಿಯಾದ ಜ್ಞಾನವನ್ನು ಒದಗಿಸಲು ಕಲ್ಪಿಸಲಾಗಿದೆ. ಹೃದಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಹುಟ್ಟಿಸುವ ಮಾಹಿತಿಗಳಿವೆ. ಅದು ಗಾಬರಿ ಉಂಟುಮಾಡಬಹುದು. ನಾವು ಅದನ್ನು ನಿವಾರಿಸಲು ಸಭೆ ನಡೆಸುತ್ತಿದ್ದೇವೆ ಎಂದರು.
ಕಾರ್ಡಿಯೋವಾಸ್ಕುಲರ್ ಮತ್ತು ಥೋರಾಸಿಕ್ ಸರ್ಜರಿ ಕೌನ್ಸಿಲ್ ಅಧ್ಯಕ್ಷ ಡಾ.ವಿವೇಕ್ ಜವಳಿ ಮಾತನಾಡಿ, ಅಧಿಕ ಧೂಮಪಾನ ಮಾಡುವುದು ಹೃದಯ ಬಡಿತ ಮತ್ತು ಹೃದಯ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡದ ಔಷಧಿಗಳಿಗೆ ದೇಹ ಪ್ರತಿಕ್ರಿಯಿಸದಂತೆ ದುರ್ಬಲಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ವೈದ್ಯರು, ತಜ್ಞರು ಸೇರಿ 500 ಕ್ಕೂ ಹೆಚ್ಚು ಪಾಲ್ಗೊಂಡಿದ್ದರು.