17 ಲಕ್ಷ ರೂ.ಕ್ಕಿಂತ ಹೆಚ್ಚು ಮೌಲ್ಯದ ಗುಣಮಟ್ಟವಲ್ಲದ ಔಷಧಿಯನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ : ದಿನೇಶ್ ಗುಂಡೂರಾವ್
"ಟ್ಯಾಟೂ ಇಂಕ್ನಿಂದ ಮಾರಣಾಂತಿಕ ಚರ್ಮರೋಗ ಸಾಧ್ಯತೆ"

ಬೆಂಗಳೂರು : ಔಷಧಿ ಗುಣಮಟ್ಟ ಕುರಿತಾಗಿ ನಡೆಸಿದ ವಿಶೇಷ ಅಭಿಯಾನದ ಮೂಲಕ ಒಂದೇ ತಿಂಗಳಿನಲ್ಲಿ 17 ಲಕ್ಷ ರೂ.ಕ್ಕಿಂತ ಹೆಚ್ಚು ಮೌಲ್ಯದ ಗುಣಮಟ್ಟವಲ್ಲದ ಔಷಧಿಯನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಆರೋಗ್ಯ ಸಚಿವ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕೆ ಸರಬರಾಜಾಗುತ್ತಿರುವ ಔಷಧ, ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ನಿಯಂತ್ರಣ ಕ್ರಮ ಕೈಗೊಳ್ಳುತ್ತಿದ್ದು, ಜನವರಿಯಲ್ಲಿ ವಿಶೇಷ ಅಭಿಯಾನ ನಡೆಸಿದೆ ಎಂದರು.
ಗುಣಮಟ್ಟವನ್ನು ಕಾಯ್ದುಕೊಳ್ಳದ ಪ್ರಕರಣಗಳಿಗೆ ಸಂಬಂಧಿಸಿ ಜನವರಿಯಲ್ಲಿ 17 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಗುಣಮಟ್ಟವಲ್ಲದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಹಾಗೆಯೇ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 1940ರಡಿಯ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ 75 ಸಂಸ್ಥೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆಯನ್ನು ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜನವರಿಯಲ್ಲಿ 1,133 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ 938 ಉತ್ತಮ ಗುಣಮಟ್ಟದ ಔಷಧಗಳೆಂದು, 106 ಗುಣಮಟ್ಟವಲ್ಲದ ಔಷಧಿಗಳೆಂದು ಘೋಷಿತವಾಗಿದೆ. ಫೆಬ್ರವರಿಯಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದ್ದು, ಇಲ್ಲಿಯವರೆಗೆ 58 ಗುಣಮಟ್ಟವಲ್ಲದ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ. ಉಳಿದ ಔಷಧಿಗಳ ವಿಶ್ಲೇಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕಾಂತಿವರ್ಧಕಗಳ ಗುಣಮಟ್ಟವನ್ನು ಪರೀಕ್ಷಿಸಲು ಇಂದಿನವರೆಗೆ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 120 ಉತ್ತಮ ಗುಣಮಟ್ಟದ ಕಾಂತಿವರ್ಧಕಗಳೆಂದು ಘೋಷಿತವಾಗಿದೆ. ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿವೆ. ಇದುವರೆಗೂ ಯಾವುದೇ ಕಾಂತಿವರ್ಧಕ ಅನುತ್ತಮ ಎಂದು ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.
ಮಾದಕ ಔಷಧಗಳ(ಎನ್‍ಡಿಪಿಎಸ್) ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಟ್ಟು 488 ಔಷಧ ಮಳಿಗೆಗಳನ್ನು ಪರಿವೀಕ್ಷಿಸಿ, ನಿಯಮಗಳನ್ನು ಉಲ್ಲಂಘಿಸಿರುವ 400 ಮಳಿಗೆಗಳಿಗೆ ಕಾರಣ ಕೇಳುವ ನೋಟೀಸು ಜಾರಿಗೊಳಿಸಲಾಗಿದೆ. ನೋಟಿಸಿಗೆ ಸಮಂಜಸ ಉತ್ತರ ನೀಡದ ಸಂಸ್ಥೆಗಳ ಪೈಕಿ 213 ಪರವಾನಗಿಗಳನ್ನು ಅಮಾನತ್ತುಗೊಳಿಸಿ, 3 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ಮಾಹಿತಿ ನಿಡಿದರು.
ಫೆ.17ರಿಂದ ಫೆ.19ರವರೆಗೆ ರಾಜ್ಯಾದ್ಯಂತ ಎಲ್ಲ ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳ ದುರ್ಬಳಕೆ ಬಗ್ಗೆ ಇಲಾಖೆಯ ಅಧಿಕಾರಿಗಳು ವಿಶೇಷ ತಪಾಸಣೆ ಕೈಗೊಂಡು 199 ಪರಿವೀಕ್ಷಣೆಗಳನ್ನು ನಡೆಸಲಾಗಿದೆ. 52 ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳನ್ನು ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ. ಈ 52 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ತನಿಖೆ ಪ್ರಗತಿಯಲ್ಲಿರುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 246 ಬ್ಯಾಚ್‍ನ ಮಾದರಿಗಳಲ್ಲಿ 113 ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನುಳಿದ ಅನುತ್ತಮ ಗುಣಮಟ್ಟದ 25 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದ್ದು, ಮೊಕದ್ದಮೆ ಹೂಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಅನುತ್ತಮ ಗುಣಮಟ್ಟದೆಂದು ಘೋಷಿತವಾದ ಔಷಧಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯುವ ನಿಟ್ಟಿನಲ್ಲಿ ದಾಸ್ತಾನುಗಳನ್ನು ಹಿಂಪಡೆಯಲು, ಚಿಲ್ಲರೆ ಔಷಧ ಮಳಿಗೆಗಳು, ಸಗಟು ಮಾರಾಟಗಾರರು, ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಶೀಘ್ರದಲ್ಲಿ ತಂತ್ರಾಂಶವನ್ನು(ಆಪ್) ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಆಹಾರ ಸುರಕ್ಷತೆ: ಜನವರಿಯಲ್ಲಿ 3,608 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 26 ಮಾದರಿಗಳು ಅಸುರಕ್ಷಿತ ಮತ್ತು 28 ಮಾದರಿಗಳು ಕಳಪೆ ಎಂದು ವರದಿಯಾಗಿವೆ. ಫೆಬ್ರವರಿಯಲ್ಲಿ 2,543 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 8 ಮಾದರಿಗಳು ಅಸುರಕ್ಷಿತ ಮತ್ತು 5 ಮಾದರಿಗಳು ಕಳಪೆ ಎಂದು ವರದಿಯಾಗಿವೆ ಎಂದು ಸಚಿವರು ಹೇಳಿದರು.
ಕೇಕ್‍ನಲ್ಲಿ ತಗ್ಗಿದ ಕೃತಕ ಬಣ್ಣದ ಪ್ರಮಾಣ: ಕೇಕ್‍ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 2024ರ ಆಗಸ್ಟ್ ನಲ್ಲಿ 295 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಿದಾಗ 12 ಮಾದರಿಗಳು(ಶೇ.4.06ರಷ್ಟು) ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಜನವರಿಯಲ್ಲಿ ಮತ್ತೊಮ್ಮೆ ಕೇಕ್‍ಗಳ 603 ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿದ್ದು, 7 ಮಾದರಿಗಳು(ಶೇ.1.16% ರಷ್ಟು) ಅಸುರಕ್ಷಿತ ಎಂದು ವರದಿಯಾಗಿರುತ್ತವೆ ಎಂದು ಅವರು ಹೇಳಿದರು.
ಫೆಬ್ರವರಿಯಲ್ಲಿ ಕುಡಿಯುವ ನೀರಿನ ಬಾಟಲ್‍ಗಳಲ್ಲಿನ 288 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಖಚಿತಪಡಿಸಿಕೊಳ್ಳಲು 106 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು, 31 ಮಾದರಿಗಳ ವಿಶ್ಲೇಷಣೆ ಪೂರ್ಣಗೊಂಡಿದೆ. 5 ಸುರಕ್ಷಿತ, 26 ಅಸುರಕ್ಷಿತ ಎಂದು ವರದಿಯಾಗಿವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯದ ನಂತರ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇದಲ್ಲದೆ ಫೆಬ್ರವರಿಯಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಪೇಪರ್ ಅನ್ನು ಬಳಸುತ್ತಿರುವ ಕುರಿತಂತೆ 681 ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀದಿ ಬದಿ ವ್ಯಾಪಾರ ಘಟಕಗಳನ್ನು ವಿಶೇಷ ಅಭಿಯಾನದ ಮೂಲಕ ತಪಾಸಣೆ ಮಾಡಿ ಅವುಗಳಲ್ಲಿ ಪ್ಲಾಸ್ಟಿಕ್ ಪೇಪರ್ ಅನ್ನು ಬಳಸುತ್ತಿದ್ದ 52 ಆಹಾರ ಉದ್ದಿಮೆಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
‘ಟ್ಯಾಟೂ ಹಾಕಲು ಉಪಯೋಗಿಸುವ ಇಂಕ್ ಅನ್ನು ಮಾರುಕಟ್ಟೆಯಿಂದ ಪಡೆದು ವಿಶ್ಲೇಷಣೆಗೆ ಒಳಪಡಿಸಿದ್ದು, 22 ಹೆವಿ ಮೆಟಲ್‍ಗಳನ್ನು ಇಂಕ್‍ನಲ್ಲಿ ಬಳಸುತ್ತಿರುವುದು ಪತ್ತೆಯಾಗಿದೆ. ಟ್ಯಾಟು ಇಂಕ್‍ಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿ ಇಲ್ಲ, ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೂ ಒಳಪಟ್ಟಿರುವುದಿಲ್ಲ. ಆದರೆ ಟ್ಯಾಟೂ ಇಂಕ್‍ನಲ್ಲಿ ಹಾನಿಕಾರಿಕ ಅಂಶಗಳಿದ್ದು, ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಚರ್ಮರೋಗ ಸೇರಿ ಮತ್ತಿತರ ರೋಗಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಟ್ಯಾಟೂ ಇಂಕ್ ಅನ್ನು ಕಾಂತಿವರ್ಧಕಗಳ ಅಡಿಯಲ್ಲಿ ತರಲು ಹಾಗೂ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಕಾರ ಮಾನದಂಡಗಳನ್ನು ರೂಪಿಸಲು ಕೇಂದ್ರ ಸರಕಾರವು ಕ್ರಮ ಜರುಗಿಸಬೇಕಾಗಿದೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ